ಬೆಳೆ ನಷ್ಟ ಹೊಂದಿದ ರೈತರ ಜಮೀನುಗಳಿಗೆ ಡೀಸಿ ಭೇಟಿ

| Published : May 25 2024, 12:58 AM IST

ಸಾರಾಂಶ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದಾಗ್ಯೂ ಕುಡಿಯುವ ನೀರಿನ ಸಮಸ್ಯೆಯಿರುವಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಪ್ರತಿ ತಾಲೂಕಿಗೂ ೮೫ ಲಕ್ಷ ರು.ಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜಲ ಜೀವನ್ ಮಿಷನ್, ತುರ್ತು ಕ್ರಿಯಾ ಯೋಜನೆಯಡಿ ಹೊಸ ಕೊಳವೆ ಬಾವಿಗಳ ಕೊರೆಯುವಿಕೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಜಿಲ್ಲೆಯ ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕಿನಲ್ಲಿ ಶುಕ್ರವಾರ ಪ್ರವಾಸ ಕೈಗೊಂಡು ರೈತ ಸಂಪರ್ಕ ಕೇಂದ್ರ, ಎಪಿಎಂಸಿ, ಮೇವು ಬ್ಯಾಂಕ್, ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯ ಮಧುಗಿರಿ ತಾಲೂಕು ಪುರವರ ಗ್ರಾಪಂ ವ್ಯಾಪ್ತಿ ದೊಡ್ಡಹೊಸಹಳ್ಳಿಯ ನರಸಿಂಹಮೂರ್ತಿಯವರ ಬಾಳೆ ತೋಟಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಳೆ-ಗಾಳಿಯಿಂದ 1.5 ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡಗಳು ಮುರಿದು ಬಿದ್ದು ನಷ್ಟವುಂಟಾಗಿದ್ದು, ಪರಿಹಾರ ಒದಗಿಸಬೇಕೆಂದು ರೈತ ಮನವಿ ಮಾಡಿದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಮಧುಗಿರಿ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸ್ವಾಮಿ ಅವರಿಗೆ ಕೂಡಲೇ ನಷ್ಟವುಂಟಾಗಿರುವ ಬೆಳೆಯ ವಿವರವನ್ನು ಪಡೆದು ತ್ವರಿತವಾಗಿ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಮಧುಗಿರಿ ತಾಲೂಕು ಹಂದ್ರಾಳು ಗ್ರಾಮದ ಶ್ರೀ ಲಕ್ಷ್ಮೀರಂಗನಾಥ ಕಲ್ಯಾಣ ಮಂಟಪ, ಕೊರಟಗೆರೆ ತಾಲೂಕು ಶ್ರೀ ಬೈಲಾಂಜನೇಯ ಸ್ವಾಮಿ ದೇವಸ್ಥಾನ, ಶಿರಾ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ತೆರೆದಿರುವ ಜಾನುವಾರುಗಳ ಮೇವಿನ ಬ್ಯಾಂಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೇವಿನ ಬ್ಯಾಂಕುಗಳಲ್ಲಿ ಮೇವು ವಿತರಣೆಯಲ್ಲಿ ತೂಕದ ವ್ಯತ್ಯಾಸವಾಗಬಾರದು ಎಂದು ವಿತರಣಾ ಸಿಬ್ಬಂದಿಗೆ ನಿರ್ದೇಶನ ನೀಡಿದರಲ್ಲದೇ, ಸಮರ್ಪಕವಾಗಿ ಮೇವು ವಿತರಣೆಯಾಗುತ್ತಿರುವ ಬಗ್ಗೆ ಸ್ಥಳೀಯ ರೈತರಿಂದ ಮಾಹಿತಿ ಪಡೆದರು.

ಮೇವು ಪಡೆಯಲು ಸ್ಥಳಕ್ಕೆ ಬಂದಿದ್ದ ಪೂಜಾರಹಳ್ಳಿ ರೈತ ಮಹಿಳೆ ಶ್ರೀಲಕ್ಷಮ್ಮ ತಮ್ಮ ಜಮೀನು ಪರಕೀಯ ಭೂಮಿ ಎಂದು ದಾಖಲೆಯಲ್ಲಿ ತೋರಿಸುತ್ತಿರುವುದರಿಂದ ಬೆಳೆ ಪರಿಹಾರ ತಮ್ಮ ಖಾತೆಗೆ ಜಮೆಯಾಗಿಲ್ಲ. ಇದನ್ನು ಸರಿಪಡಿಸಿ ಪರಿಹಾರ ದೊರಕುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು. ಕಾರಣ ತಿಳಿದು ಕೂಡಲೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.

ಮಧುಗಿರಿ ತಾಲೂಕು ಪುರವರ ಹಾಗೂ ಶಿರಾ ತಾಲೂಕು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಬರ ಪರಿಹಾರದ ಹಣ ಜಮೆಯಾದ ರೈತರ ಪಟ್ಟಿಯನ್ನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚುರಪಡಿಸಬೇಕು. ಇದುವರೆಗೂ ಪರಿಹಾರದ ಹಣ ಜಮೆಯಾಗದವರಿಗೆ ಬಾಕಿ ಉಳಿಯಲು ಕಾರಣವೇನೆಂದು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಕಷ್ಟು ರೈತರಿಗೆ ಆಧಾರ್ ಜೋಡಣೆಯಾಗದ ಕಾರಣ ಪರಿಹಾರ ಹಣ ರೈತರ ಖಾತೆಗೆ ಜಮೆಯಾಗಿಲ್ಲ. ಕೂಡಲೇ ಆಧಾರ್ ಜೋಡಣೆಯ ಕಾರ್ಯ ಪೂರ್ಣಗೊಳಿಸಲು ತಹಸೀಲ್ದಾರ್‌ ರಿಗೆ ನಿರ್ದೇಶನ ನೀಡಿದರು.

ಮಧುಗಿರಿ ತಾಲೂಕು ಬ್ಯಾಲ್ಯಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಯ ಕೊಠಡಿ ಪರಿಶೀಲಿಸಿದರು. ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಸ್ವಚ್ಛತೆಯಿಲ್ಲದೇ ಧೂಳಿನಿಂದ ಕೂಡಿದ ಆಸ್ಪತ್ರೆ ಉಪಕರಣಗಳನ್ನು ಕಂಡ ಅವರು, ಗ್ರೂಪ್ ಡಿ ಸಿಬ್ಬಂದಿ ಮಂಜುಳ ಅವರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. ವೈದ್ಯಾಧಿಕಾರಿ ಡಾ. ಸಿಂಧೂ , ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಹುದ್ದೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಕೆರೆ ಒತ್ತುವರಿ ತೆರವಿಗೆ ಕೈಗೊಂಡ ಕ್ರಮದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ, ಉತ್ತರಿಸಿದ ಜಿಲ್ಲಾಧಿಕಾರಿ ಯಾರೇ ಆಗಲಿ ಕೆರೆ ಒತ್ತುವರಿ ಮಾಡಿಕೊಳ್ಳುವಂತಿಲ್ಲ. ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಶಿರಾ ಪಟ್ಟಣದ ಎಪಿಎಂಸಿ, ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ವಿವಿಧ ತಾಲೂಕಿನ ತಹಸೀಲ್ದಾರರು, ಕೃಷಿ, ಬೆಸ್ಕಾಂ, ಗ್ರಾಪಂ, ತೋಟಗಾರಿಕೆ, ಪಶುವೈದ್ಯ, ಗ್ರಾಮೀಣ ಮತ್ತು ನೀರು ನೈರ್ಮಲ್ಯ ಇಲಾಖೆ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕುಡಿಯುವ ನೀರಿನ ಗುಣಮಟ್ಟ ಪರಿಶೀಲಿಸಲು ಸೂಚನೆ:

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ನೀರಿನ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಆದಾಗ್ಯೂ ಕುಡಿಯುವ ನೀರಿನ ಸಮಸ್ಯೆಯಿರುವಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಪ್ರತಿ ತಾಲೂಕಿಗೂ ೮೫ ಲಕ್ಷ ರು.ಗಳ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಜಲ ಜೀವನ್ ಮಿಷನ್, ತುರ್ತು ಕ್ರಿಯಾ ಯೋಜನೆಯಡಿ ಹೊಸ ಕೊಳವೆ ಬಾವಿಗಳ ಕೊರೆಯುವಿಕೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಎಲ್ಲ ಜಲಮೂಲಗಳ ಗುಣಮಟ್ಟದ ಬಗ್ಗೆ ಪರೀಕ್ಷೆಗೊಳಪಡಿಸಲು ಸೂಚಿಸಲಾಗಿದೆ. ಅಲ್ಲದೇ ಮುಂದಿನ ವಾರ ಶಾಲೆ/ ವಸತಿ ನಿಲಯಗಳು ಪ್ರಾರಂಭವಾಗುವುದರಿಂದ ಶಾಲೆ/ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಪರೀಕ್ಷೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.