ಸಾರಾಂಶ
ಮೃತ ಮಂಗಳ ಅವರ ಮಗ ಚಿರಂತ್ (23) ಬಿಎಸ್ಸಿ ಮುಗಿದಿದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಏನು ಸಹಕಾರ ಬೇಕೋ ಖಂಡಿತವಾಗಿ ಮಾಡಿ, ನೈತಿಕವಾಗಿ ಜೊತೆಯಲ್ಲಿ ಇರುತ್ತವೆ ಎಂದು ತಿಳಿಸಿದರು .
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರು ಗ್ರಾಮದಲ್ಲಿ ಯುಗಾದಿ ಹಬ್ಬದಂದು ಅಡುಗೆ ಮಾಡುವ ವೇಳೆ ಗ್ಯಾಸ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಮೂವರು ಮಹಿಳೆಯರ ಮನೆಗೆ ಜಿಲ್ಲಾಧಿಕಾರಿ ಸಿ,ಸತ್ಯಭಾಮ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಕಾರ್ಯಕ್ರಮವೊಂದಕ್ಕೆ ಸಾಮೂಹಿಕವಾಗಿ ಕುಟುಂಬಸ್ಥರು ಸೇರಿಕೊಂಡು ಯುಗಾದಿ ಹಬ್ಬದ ದಿನ ತಿಂಡಿ- ತಿನಿಸುಗಳನ್ನು ಮಾಡುವಲ್ಲಿ ತೊಡಗಿದ್ದರು. ಆದರೆ ಅಡುಗೆ ಮಾಡುವ ಸ್ಟವ್‌ನಿಂದ ಗ್ಯಾಸ್ ಸೋರಿಕೆ ಆಗುತ್ತಿರುವುದನ್ನು ಗಮನಿಸಿರಲಿಲ್ಲ. ಕ್ಷಣಾರ್ಧದಲ್ಲಿ ಗ್ಯಾಸ್ ಸ್ಫೋಟಗೊಂಡ ಪರಿಣಾಮ ನಾಲ್ವರು ಗಾಯಗೊಂಡಿದ್ದರು. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿತ್ತು, ಒಬ್ಬರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದವರನ್ನು ಕಳೆದುಕೊಂಡಿದ್ದೇವೆ ಎಂದು ಕುಟುಂಬಸ್ಥರು ತಮ್ಮ ನೋವನ್ನು ಜಿಲ್ಲಾಧಿಕಾರಿ ಮುಂದೆ ತೋಡಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮ ಅವರು, ಮೂವರು ಮಹಿಳೆಯರ ಸಾವನ್ನು ಕುಟುಂಬದವರು ಸಹಿಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ನಮ್ಮ ಕಡೆಯಿಂದ ಯಾವುದೇ ಪರಿಹಾರ ಇರುವುದಿಲ್ಲ. ಆದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರಿಗೆ ಸಹಾಯ ಮಾಡಲು ಅವಕಾಶ ಇದೆ, ಸಂಸದರು ವರದಿ ಹಾಕಬೇಕು. ಪೊಲೀಸ್ ಎಫ್.ಐ.ಆರ್ ಎಲ್ಲವನ್ನೂ ತೆಗೆದುಕೊಂಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದು ಪರಿಹಾರ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.ಮೃತ ಮಂಗಳ ಅವರ ಮಗ ಚಿರಂತ್ (23) ಬಿಎಸ್ಸಿ ಮುಗಿದಿದೆ. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಏನು ಸಹಕಾರ ಬೇಕೋ ಖಂಡಿತವಾಗಿ ಮಾಡಿ, ನೈತಿಕವಾಗಿ ಜೊತೆಯಲ್ಲಿ ಇರುತ್ತವೆ ಎಂದು ತಿಳಿಸಿದರು
ತಹಸೀಲ್ದಾರ್ ಸೌಮ್ಯ, ಗ್ರೇಡ್ - ತಹಸೀಲ್ದಾರ್ ಸಿ.ಸ್ವಾಮಿ , ಕೊಣನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಕೊಣನೂರು ಉಪ ತಹಸೀಲ್ದಾರ್ ಕುಮಾರ್ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್ ಬಲರಾಮ್, ಗ್ರಾಮಸ್ಥರು ಹಾಜರಿದ್ದರು.