ಸಾರಾಂಶ
ಇತಿಹಾಸದ ಕುರುಹುಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರ ಮಾಡುವ ಹೊಣೆ ಎಲ್ಲರ ಮೇಲಿದೆ.
ಹಗರಿಬೊಮ್ಮನಹಳ್ಳಿ: ಇತಿಹಾಸದ ಮಹತ್ವ ಸಾರುವ ದೇವಸ್ಥಾನಗಳ ಸಂರಕ್ಷಣೆಗೆ ಸರಕಾರದ ಜತೆಗೆ ಸಮುದಾಯದ ಸಹಭಾಗಿತ್ವವೂ ಅಗತ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.
ತಾಲೂಕಿನ ಬೆಣ್ಣಿಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಬನ್ನಿಮರದ ಬಸವೇಶ್ವರ ದೇವಸ್ಥಾನದ ಚಾವಣಿ ದುರಸ್ತಿ ಕುರಿತಂತೆ ಗ್ರಾಮಸ್ಥರ ಮನವಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.ಇತಿಹಾಸದ ಕುರುಹುಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರ ಮಾಡುವ ಹೊಣೆ ಎಲ್ಲರ ಮೇಲಿದೆ. ವಿಷ್ಣು ಮತ್ತು ಶಿವಮಂದಿರ ಹೊಂದಿದ ತೀರಾ ಅಪರೂಪದ ದೇಗುಲಗಳಲ್ಲಿ ಗ್ರಾಮದ ದೇಗುಲವೂ ಒಂದಾಗಿದೆ. ದೇಗುಲದ ಚಾವಣಿ ದುರಸ್ತಿಗೆ ಸೂಕ್ತ ಕ್ರಮ ಕೈಗೆತ್ತಿಕೊಳ್ಳಲಾಗುವುದು ಎಂದರು.ಬನ್ನಿಮರದ ಬಸವೇಶ್ವರ ದೇಗುಲದ ಸೇವಾಸಮಿತಿ ಅಧ್ಯಕ್ಷ ಬಿ.ಆರ್. ಬಸವನಗೌಡ ಮಾತನಾಡಿ, ದೇಗುಲದಲ್ಲಿ 12ನೇ ಶತಮಾನದ ಹೊಯ್ಸಳ ದೊರೆ ಅಮಿತ ಚಮ್ಮಪ್ಪ ನಾಯಕ ನಿರ್ಮಿಸಿದ್ದು, ಪಂಚಲಿಂಗಗಳನ್ನು ಹೊಂದಿದೆ. ಆದರೆ, ಸೋರುವ ಚಾವಣಿಯಿಂದಾಗಿ ದೇಗುಲದಲ್ಲಿನ ಶಾಸನ ಮತ್ತು ಇತಿಹಾಸದ ಪುರಾವೆಗಳಿಗೆ ಹಾನಿಯಾಗುತ್ತದೆ ಎಂದರು.
ಕಂದಾಯ ನಿರೀಕ್ಷಕ ರಾಜೇಶ್ ಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಗುರುಬಸವರಾಜ, ಸೇವಾಸಮಿತಿಯ ಬಿ.ಎಚ್.ಎಂ. ಬಸಯ್ಯ, ಕರಿಬಸವರಾಜ, ವೆಂಕಪ್ಪ, ಕಲ್ಲಪ್ಪ, ಪ್ರತಾಪ, ಕುಮಾರ್, ಬಸವರಾಜ, ಪುಜಾರಿ ಅಂಬಜ್ಜ, ಜಗದಪ್ಪ, ನಾಗರಾಜ ಇತರರಿದ್ದರು.ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಮದ ಇತಿಹಾಸ ಪ್ರಸಿದ್ಧ ಬನ್ನಿಮರದ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರನ್ನು ಗ್ರಾಮಸ್ತರು ಸನ್ಮಾನಿಸಿದರು.