ಸೋರುತ್ತಿದೆ ಧಾರವಾಡ ಸರ್ಕಾರಿ ಮಹಿಳಾ ಕಾಲೇಜ್‌

| Published : Jul 21 2024, 01:30 AM IST

ಸಾರಾಂಶ

ಶತಮಾನ ಕಂಡ ಕಟ್ಟಡದಲ್ಲಿ ನಡೆಯುತ್ತಿರುವ ಧಾರವಾಡ ಸಕಾ್ರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮಳೆಯಿಂದ ಸೂರುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಳ್ಳಲು ಕಷ್ಟವಾಗಿದೆ.

ಧಾರವಾಡ:

ಇಲ್ಲಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಶುಕ್ರವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಸೋರುತ್ತಿದ್ದ ಕಟ್ಟಡ ಪರಿಶೀಲಿಸಿ ಅಗತ್ಯ ಸೌಲಭ್ಯಗಳ ಕುರಿತು ಚರ್ಚಿಸಿದರು.ಮಳೆಗಾಲದಲ್ಲಿ ಸೋರಿಕೆಯಿಂದಾಗಿ ವಿದ್ಯಾರ್ಥಿನಿಯರಿಗೆ ತರಗತಿ ತೆಗೆದುಕೊಳ್ಳುವುದು ಕಷ್ಟವಾಗಿದೆ. ಮೂಲ ಸೌಕರ್ಯಗಳ ಕೊರತೆ ಇದೆ ಎಂಬ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಶುಕ್ರವಾರ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಕ್ಲಾಸ್ ರೂಮ್, ಕಚೇರಿಗೆ ಹೋಗಿ ಪರಿಶೀಲಿಸಿದ ಅವರು, ತರಗತಿಯಲ್ಲಿದ್ದ ವಿದ್ಯಾರ್ಥಿನಿಯರಿಗೆ ಅಲ್ಲಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿನಿಯರ ಹಾಜರಾತಿ ಪರಿಶೀಲಿಸಿ, ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಅವರ ವೈಯಕ್ತಿಕ ಕಾಳಜಿ ಮಾಡಬೇಕೆಂದು ಸೂಚಿಸಿದರು. ನಂತರ ಮಾಧ್ಯಮಗಳಿಗೆ ಮಾತನಾಡಿದ ಅವರು, ಇದು ಶತಮಾನದಷ್ಟು ಹಳೆಯ ಕಟ್ಟಡ ಇರುವುದರಿಂದ ದುರಸ್ತಿಗಿಂತ ಬೇರೆ ಕಟ್ಟಡದಲ್ಲಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ, ಬೋಧನೆ ಕಲಿಕೆಗೆ ಅವಕಾಶ ಮಾಡುವುದು ಉತ್ತಮವೆನಿಸುತ್ತದೆ ಎಂದು ಸಲಹೆ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಸ್ಥಳೀಯ ಶಾಸಕರ ಪ್ರಯತ್ನದಿಂದಾಗಿ ಮಹಿಳಾ ಕಾಲೇಜಿಗೆ ನೂತನ ಕಟ್ಟಡ ಮತ್ತು ಕಟ್ಟಡ ನಿರ್ಮಾಣಕ್ಕೆ ಈಗ ಕಾಲೇಜಿರುವ ಸ್ಥಳದಲ್ಲಿ ಒಂದು ಎಕರೆ ಜಮೀನು ಸಹ ಮಂಜೂರು ಆಗಿದೆ. ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕೆ ₹ 3.5 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ₹ 1.16 ಕೋಟಿ ಬಿಡುಗಡೆಗೆ ಆದೇಶವೂ ಆಗಿದೆ. ಕಾಲೇಜು ಕಟ್ಟಡ ನಿರ್ಮಾಣ ಏಜನ್ಸಿಯವರ ಸಮನ್ವಯ ಕೊರತೆ, ನಿಧಾನಗತಿಯಿಂದ ಕಾಮಗಾರಿ ಆರಂಭವಾಗಿಲ್ಲ. ಈಗಾಗಲೇ ಕಾಲೇಜು ಪ್ರಾಚಾರ್ಯರಿಗೆ ಮತ್ತು ಕರ್ನಾಟಕ ಗೃಹ ಮಂಡಳಿ ಎಇಇ ಅವರಿಗೆ ಸೂಚನೆ ನೀಡಿ, ಆದಷ್ಟು ಶೀಘ್ರ ಟೆಂಡರ್ ಮಾಡಿ, ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದರು.

ಅತೀ ಶೀಘ್ರದಲ್ಲಿ ವಿದ್ಯಾರ್ಥಿನಿಯರಿಗೆ ಬೋಧನಾ ಕೊಠಡಿ ಬೇರೆ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿನೀಯರಿಗೆ, ಭಯ ಬೇಡ. ಸಮಸ್ಯೆಗಳಿದ್ದಲ್ಲಿ ನೇರವಾಗಿ ತಮ್ಮಗೆ ಭೇಟಿ ಆಗಿ ಗಮನಕ್ಕೆ ತರುವಂತೆ ಕಾಲೇಜು ಪ್ರಾಚಾರ್ಯರಿಗೆ ಸೂಚನೆ ನೀಡಿದ್ದೇನೆ. ಮುಂದಿನ ಎರಡ್ಮೂರು ದಿನದಲ್ಲಿ ಈ ಸಮಸ್ಯೆ ಪರಿಹರಿಸಲು ಪ್ರಯತ್ನಸುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.