ಸಾರಾಂಶ
ಪರೀಕ್ಷೆಗಳ ಲೈವ್ ವೆಬ್‌ಸ್ಟ್ರೀಮಿಂಗ್‌ಗಾಗಿ ಜಿಪಂನಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನೇಮಕವಾದ ಅಧಿಕಾರಿ, ಸಿಬ್ಬಂದಿ ಪರೀಕ್ಷೆ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಧಾರವಾಡ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತ, ಪಾರದರ್ಶಕವಾಗಿ ನಿಯಮಾನುಸಾರ ಜರುಗಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪರೀಕ್ಷೆಗಳ ಲೈವ್ ವೆಬ್‌ಸ್ಟ್ರೀಮಿಂಗ್‌ಗಾಗಿ ಜಿಪಂನಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನೇಮಕವಾದ ಅಧಿಕಾರಿ, ಸಿಬ್ಬಂದಿ ಪರೀಕ್ಷೆ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿ ಒಟ್ಟು 106 ಪರೀಕ್ಷಾ ಕೇಂದ್ರಗಳಿದ್ದು, 1310 ಪರೀಕ್ಷಾ ಕೊಠಡಿಗಳಿವೆ. ಪರೀಕ್ಷಾ ಕೊಠಡಿ, ಮುಖ್ಯ ಪರೀಕ್ಷಕರ ಕೊಠಡಿ, ಕಾರಿಡಾರ್ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳು ಸೇರಿ 1522 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲ 106 ಪರೀಕ್ಷಾ ಕೇಂದ್ರಗಳನ್ನು ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರ ವರೆಗೆ ನಿರಂತರವಾಗಿ ನಿಗಾವಹಿಸಲು ಅಗತ್ಯ ಸಿಬ್ಬಂದಿಗೆ ತರಬೇತಿ ನೀಡಿ, ನೇಮಿಸಲಾಗಿದೆ ಎಂದರು.ಜಿಲ್ಲಾ ಪಂಚಾಯತ್ ಸಿಇಒ ಭುವನೇಶ ಪಾಟೀಲ ಮಾತನಾಡಿ, ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ನಿರಂತರ ವಿದ್ಯುತ್, ಇಂಟರ್ನೆಟ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ನಿಯಮಬಾಹಿರ ವರ್ತನೆಗಳು ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಕಂಡುಬಂದರೆ ತಕ್ಷಣ ಸಂಬಂಧಿಸಿದವರಿಗೆ ಮಾಹಿತಿ ನೀಡಿ, ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು. ಡಿಡಿಪಿಐ ಎಸ್.ಎಸ್.ಕೆಳದಿಮಠ, ಕೇಂದ್ರ ನೋಡಲ್ ಅಧಿಕಾರಿ ಪ್ರಭಯ್ಯ ಚಿಕ್ಕಮಠ ಇತರರು ಇದ್ದರು.