ಸಾರಾಂಶ
ಕೊಳ್ಳೇಗಾಲದ ಪೌರ ಕಾರ್ಮಿಕರ ಕಾಲೋನಿ ಸೇರಿದಂತೆ ಹಲವೆಡೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ವಿವಿಧ ಬಡಾವಣೆಗಳಲ್ಲಿ ನಗರೋತ್ಥಾನ ಯೋಜನೆಯಡಿ ನಡೆದಿರುವ ಕಾಮಗಾರಿಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ರಸ್ತೆ, ದೇವಾಂಗ ಪೇಟೆ ಬಡಾವಣೆಯಲ್ಲಿ ನಡೆಯುವ ಕಾಮಗಾರಿ ವೀಕ್ಷಿಸಿದ ಬಳಿಕ ಅಮ್ಮನ್ ಕಾಲೋನಿ ಬಡಾವಣೆಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಪೌರ ಕಾರ್ಮಿಕರ ಕಾಲೋನಿ ರಸ್ತೆ ಹಾಗೂ ಚರಂಡಿ ಇಲ್ಲದೇ ಮಳೆ ಬಂದಾಗ ಉಂಟಾಗುವ ಅವಾಂತರ ತಡೆಗಟ್ಟಲು ಶಾಶ್ವತ ಪರಿಹಾರವಾಗಬೇಕು, ನಗರೋತ್ಥಾನ 4 ನೇ ಹಂತದ ಯೋಜನೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿ 8 ತಿಂಗಳಾದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ನಗರಸಭೆ ಸದಸ್ಯ ರಾಘವೇಂದ್ರ ಜಿಲ್ಲಾಧಿಕಾರಿಗೆ ದೂರಿದ ಹಿನ್ನೆಲೆ ಕೂಡಲೇ ಪ್ರಾರಂಭ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಪೌರ ಕಾರ್ಮಿಕರ ದೂರಿಗೆ ಸ್ಪಂದನೆ, ಭೇಟಿ:ಪ್ರವಾಸಿ ಮಂದಿರದಲ್ಲಿ ಪೌರ ಕಾಮಿ೯ಕರು ತಮ್ಮ ಅಮ್ಮನ್ ಕಾಲೋನಿ ಬಡಾವಣೆ ಸ್ಥಿತಿ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ಶಿಲ್ಪಾನಾಗ್ ಅವರು ದೀಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರಸ್ತೆಯಲ್ಲಿನ ಕೆಸರು ತುಂಬಿದ ನೀರು, ಅಶುಚಿತ್ವ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿತು. ಈ ವೇಳೆ ಕೆಸರು ನೀರಿನ ಮಧ್ಯೆ ಕಲ್ಲು ಮತ್ತು ಇಟ್ಟಿಗೆಗನ್ನಿಟ್ಟು ಜಿಲ್ಲಾಧಿಕಾರಿಗಳ ಪರಿಶೀಲನೆಗೆ ಪೌರ ಕಾರ್ಮಿಕರ ನಿವಾಸಿಗಳು ಸಾಥ್ ನೀಡಿದರು. ಕೆಸರಿನಲ್ಲೆ ಜಿಲ್ಲಾಧಿಕಾರಿಗಳು ನಡೆದು ಕಾಮಗಾರಿ ಪರಿಶೀಲಿಸಿದರು.ಅಲ್ಲಿನ ಸಮಸ್ಯೆ ಕಂಡು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ತದೇಕ ಚಿತ್ತದಿಂದ ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸಿ, ಇದರ ಪರಿಹಾರವನ್ನು 2 ತಿಂಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಇದೆ ತಿಂಗಳ 29ರಂದು ಸಭೆ ಕರೆದು ಪೌರ ಕಾರ್ಮಿಕರ ಸಮಸ್ಯೆ ನಿವಾರಣೆ ಮತ್ತು ಸ್ಲಂಬೋರ್ಡ್‌ನ ಮನೆ ವಿಚಾರ ಪರಿಶೀಲಿಸಿ ಬಗೆಹರಿಸಲು ಹಿರಿಯ ಅಧಿಕಾರಿಗಳಿಗೆ ವಿವರಿಸಲಾಗುವುದು. ಪಟ್ಟಣವನ್ನೆ ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಕಾಲೋನಿ ಸ್ಥಿತಿ ಸುಸ್ಥಿತಿಯಲ್ಲಿರಬೇಕು, ಮುಂದಿನ ಪೀಳಿಗೆಗಾದರೂ ಅವರು ಕಾಯಿಲೆಗೊಳಗಾಗದೆ ಉತ್ತಮ ಜೀವನ ಸಾಗಿಸುವಂತಾಗಬೇಕು ಎಂದರು.ಈ ವೇಳೆ ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸದಸ್ಯರುಗಳಾದ ಸುಮಾ, ರಾಘವೇಂದ್ರ, ಮಂಜುನಾಥ್, ನಾಗೇಂದ್ರ, ಪೌರಾಯುಕ್ತ ರಮೇಶ್, ಪರಿಸರ ಇಂಜಿನಿಯರ್ ಪ್ರಸನ್ನ, ಇಂಜಿನಿಯರ್ ನಾಗೇಂದ್ರ, ಲಕ್ಷ್ಮೀ ಇನ್ನಿತರರು ಇದ್ದರು.