ಡಿಸಿಸಿ ಬ್ಯಾಂಕ್‌ಗೆ ₹10.58 ಕೋಟಿ ನಿವ್ವಳ ಲಾಭ: ಆರ್.ಎಂ.ಮಂಜುನಾಥಗೌಡ

| Published : Sep 11 2024, 01:12 AM IST

ಡಿಸಿಸಿ ಬ್ಯಾಂಕ್‌ಗೆ ₹10.58 ಕೋಟಿ ನಿವ್ವಳ ಲಾಭ: ಆರ್.ಎಂ.ಮಂಜುನಾಥಗೌಡ
Share this Article
  • FB
  • TW
  • Linkdin
  • Email

ಸಾರಾಂಶ

2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲವನ್ನು 104250 ರೈತರಿಗೆ 1010.20 ಕೋಟಿ ರು. ಸಾಲ ಹಂಚಿಕೆ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2023-24ನೇ ಸಾಲಿನಲ್ಲಿ 10.58 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, 2025ರ ಮಾರ್ಚ್ ಅಂತ್ಯಕ್ಕೆ 25 ಕೋಟಿ ರು. ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ಒಟ್ಟು 17.99 ಕೋಟಿ ರು. ಲಾಭ ಗಳಿಸಿದೆ. ಷೇರು ಬಂಡವಾಳ 138.98 ಕೋಟಿ ರು., ನಿಧಿಗಳು 67.46 ಕೋಟಿ ರು. ಹಾಗೂ ದುಡಿಯುವ ಬಂಡವಾಳ 2332.29 ಕೋಟಿ ರು. ಇದ್ದು, 1462.78 ಕೋಟಿ ರು. ಠೇವಣಿ ಸಂಗ್ರಹಣೆಯಾಗಿದೆ ಎಂದರು.

2023-24ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಕೃಷಿ ಬೆಳೆ ಸಾಲವನ್ನು 104250 ರೈತರಿಗೆ 1010.20 ಕೋಟಿ ರು. ಸಾಲ ಹಂಚಿಕೆ ಮಾಡಲಾಗಿದೆ. ಈ ಪೈಕಿ 3581 ಹೊಸ ರೈತರಿಗೆ 43.04 ಕೋಟಿ ರು. ಹಾಗೂ ಹೆಚ್ಚುವರಿ ಸಾಲ 6683 ರೈತ ರಿಗೆ 33.68 ಕೋಟಿ ರು. ಸಾಲ ವಿತರಣೆ ಮಾಡಿದ್ದು, ಶೇ.108.96ರಷ್ಟು ಪ್ರಗತಿಯಾಗಿದೆ. ಆ.24ರ ಅಂತ್ಯದವರೆಗೆ ಒಟ್ಟು 37672 ರೈತರಿಗೆ ಒಟ್ಟು 417.85 ಕೋಟಿ ರು. ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿ ಶೇ. 99.07ರಷ್ಟು ಇದೆ ಎಂದು ಮಾಹಿತಿ ನೀಡಿದರು.

1696 ಸ್ವಸಹಾಯ ಸಂಘಗಳಿಗೆ 2023-24ನೇ ಸಾಲಿನಲ್ಲಿ 73.33 ಕೋಟಿ ರು. ಸಾಲ ವಿತರಿಸಿದ್ದು, ಶೇ. 100 ರಷ್ಟು ಪ್ರಗತಿ ಯಲ್ಲಿದೆ. 2024 ರ ಆಗಸ್ಟ್ ಅಂತ್ಯದವರೆಗೆ ಒಟ್ಟು 680 ಸ್ವಸಹಾಯ ಸಂಘಗಳಿಗೆ 29.53 ಕೋಟಿ ರು. ಸಾಲ ಹಂಚಿಕೆ ಮಾಡಲಾಗಿದ್ದು, ಸಾಲ ವಸೂಲಾತಿಯಲ್ಲಿ ಶೇ.99ರಷ್ಟು ಇದೆ ಎಂದರು.

ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶ ನೀಡಿದ್ದು, ಬ್ಯಾಂಕ್ ನಿಂದ ಈಗಾಗಲೇ ಹಲವು ಸೌಲಭ್ಯಗಳನ್ನು ಸದಸ್ಯರಿಗೆ ಒದಗಿಸಲಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಯಂತೆ ಶೂನ್ಯ ಬಡ್ಡಿದರದಲ್ಲಿ ಪಶುಸಂಗೋಪನೆ ಉದ್ದೇಶಕ್ಕೆ 3008 ಸದಸ್ಯರಿಗೆ 6.53 ಕೋಟಿ ರು. ಸಾಲ ನೀಡಲಾಗಿದೆ. ಬ್ಯಾಂಕ್ ಶಾಖೆಗಳ ಮೂಲಕ 15231 ವ್ಯಕ್ತಿಗಳಿಗೆ 519.16 ಕೋಟಿ ರು. ಕೃಷಿಯೇತರ ಸಾಲ ವಿತರಿಸಲಾಗಿದೆ ಎಂದರು.

ಬ್ಯಾಂಕ್ ಮೊಬೈಲ್ ಆ್ಯಪ್ :

ಮೊಬೈಲ್‌ ಬ್ಯಾಂಕ್‌ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದು, ಈ ಆ್ಯಪ್ ಮೂಲಕ ಬ್ಯಾಂಕ್ ನ ಗ್ರಾಹಕರು ಖಾತೆಗಳ ಬ್ಯಾಲೆನ್ಸ್, ಮಿನಿ ಪಾಸ್ ಬುಕ್, ಬ್ಯಾಂಕ್ ಸಾಮಾನ್ಯ ಮಾಹಿತಿಗಳು, ಪಾಸಿಟಿವ್ ಪೇ ಸಿಸ್ಟಂನಡಿಯಲ್ಲಿ ಗ್ರಾಹಕರು ನೀಡಿದ ಚೆಕ್ ವಿವರಗಳನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ನೂತನ ಶಾಖೆಗಳು:

ಜಿಲ್ಲೆಯ ಗ್ರಾಹಕರ ಅನುಕೂಲಕ್ಕಾಗಿ ಭದ್ರಾವತಿ ತಾಲೂಕಿನ ಕಲ್ಲಿಹಾಳ್, ಸೊರಬ ತಾಲೂಕಿನ ಜಡೆ ಹಾಗೂ ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪದಲ್ಲಿ ನೂತನ ಶಾಖೆಯನ್ನು ದಸರಾ ಹಬ್ಬದೊಳಗಾಗಿ ಆರಂಭಿಸಲಾಗುವುದು ಎಂದರು.

ಒಟ್ಟು 22 ಶಾಖೆಗಳ ಅನುಮತಿಗಾಗಿ ಆರ್‌ ಬಿಐ ಗೆ ಅರ್ಜಿ ಸಲ್ಲಿಸಿದ್ದು, ಸದ್ಯ 3 ಶಾಖೆಗೆ ಅನುಮತಿ ನೀಡಿದೆ. ಮುಂದಿನ ದಿನಗಳಲ್ಲಿ ಉಳಿದ 19 ಶಾಖೆಗೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬ್ಯಾಂಕ್ ನ ಉಪಾಧ್ಯಕ್ಷ ಎಸ್. ಕೆ. ಮರಿಯಪ್ಪ, ನಿರ್ದೇಶಕರಾದ ಹನುಮಂತು, ಮಹಾಲಿಂಗ ಶಾಸ್ತ್ರಿ, ದುಗ್ಗಪ್ಪಗೌಡ, ಜಿ. ಎನ್. ಸುಧೀರ್, ಚಂದ್ರಶೇಖರಗೌಡ, ಪರಮೇಶ್, ದಶರಥಗಿರಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಕಲ್ಮನೆ ಉಪಸ್ಥಿತರಿದ್ದರು.ಮೊಬೈಲ್‌ ಬ್ಯಾಂಕಿಂಗ್‌ ಆರಂಭ

ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಒಂದು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಯಾಗಿದೆ ಎಂದರು.

ಇದರ ಪ್ರತಿಕ್ರಿಯೆ ನೋಡಿಕೊಂಡು ಇನ್ನೊಂದು ಮೊಬೈಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ನಿಗಿದಿತ ದಿನಾಂಕದಂದು ಮೊಬೈಲ್‌ ಬ್ಯಾಂಕಿಂಗ್‌ ಗ್ರಾಮೀಣ ಪ್ರದೇಶಕ್ಕೆ ತೆರಳಲಿದೆ. ಈ ಮೊಬೈಲ್ ವ್ಯಾನ್‌ನಲ್ಲಿ ಎಟಿಎಂ ಅಳವಡಿಸಿದ್ದು, ಮುಖ್ಯವಾಗಿ ಹಾಲು ಉತ್ಪಾದಕ ಸಂಘದ ಸದಸ್ಯರು ಮತ್ತು ಗ್ರಾಹಕರು ನಮ್ಮ ಬ್ಯಾಂಕಿನ ಎಟಿಎಂ ಕಾರ್ಡ್ ಮುಖಾಂತರ ಹಣ ಡ್ರಾ ಮಾಡಬಹುದು ಮತ್ತು ನಗದು ಹಣ ಖಾತೆಗೆ ಹಾಕಬಹುದಾಗಿದೆ ಎಂದರು.