ಸಾರಾಂಶ
ದ.ಕ. ಜಿಲ್ಲಾ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದ ಬಳಿ ಸಾಲಮನ್ನಾ ವಂಚಿತ ರೈತರ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಸಾಲಮನ್ನಾ ಮೊತ್ತ ರೈತರಿಗೆ ಪಾವತಿಯಾಗದಿರಲು ಸಹಕಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳೇ ಹೊಣೆಯಾಗಿದ್ದು, ೨೦೧೮ರಲ್ಲಿ ಜಾರಿಯಾದ ಸಾಲ ಮನ್ನಾ ಯೋಜನೆಯಲ್ಲಿ ದ.ಕ. ಜಿಲ್ಲೆಯ ಶೇ.೪೦ ರೈತರಿಗೆ ಮಾತ್ರ ದೊರೆತಿದೆ. ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದ ರೈತರಿಗೆ ಸವಲತ್ತು ತಲುಪದಂತಾಗಿದೆ. ನಿಗದಿತ ಅವಧಿಯಲ್ಲಿ ಸಾಲ ಮನ್ನಾದ ಮೊತ್ತ ರೈತರಿಗೆ ಪಾವತಿಯಾಗಗಿದ್ದಲ್ಲಿ ಡಿಸಿಸಿ ಬ್ಯಾಂಕ್ ಚಲೋ ನಡೆಸಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.ಅವರು ದ.ಕ. ಜಿಲ್ಲಾ ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿರುವ ಅಮರ್ ಜವಾನ್ ಸ್ಮಾರಕದ ಬಳಿ ನಡೆದ ಸಾಲ ಮನ್ನಾ ವಂಚಿತ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ರೈತರ ಸಾಲ ಮನ್ನಾ ವಿಚಾರದಲ್ಲಿ ಮಾಹಿತಿಗಾಗಿ ಯಾವುದೇ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಕಚೇರಿಗೆ ಬಂದು ಬೇಡಿಕೆ ಕೇಳಿದರೂ ರೈತರಿಗೆ ಸರಿಯಾದ ಮಾಹಿತಿ ನಿಡದೇ ಸತಾಯಿಸುತ್ತಿದ್ದಾರೆ. ಸಾಲ ಮನ್ನಾದ ಮೊತ್ತವನ್ನು ಒಂದು ತಿಂಗಳ ಒಳಗಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಕಳೆಂಜ ಬಾಳಿಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮಾತನಾಡಿ, ಅಧಿಕಾರಿಗಳ ಎಡವಟ್ಟು ಹಾಗೂ ಅವರು ನೀಡುವ ವಿವಿಧ ನೆಪಗಳಿಂದಾಗಿ ರೈತರು ಸಾಲ ಮನ್ನಾದಿಂದ ವಂಚಿತರಾಗಿದ್ದಾರೆ. ಅರ್ಹ ರೈತರಿಗೆ ಸೌಲಭ್ಯ ದೊರೆತಿಲ್ಲ ಎಂದರು.
ಪ್ರತಿಭಟನಾ ಸಭೆಯ ಬಳಿಕ ಸಹಾಯಕ ಆಯುಕ್ತರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಲಾಯಿತು.ಸಾಲಮನ್ನಾ ಹೋರಾಟ ಸಮಿತಿ ಸಂಚಾಲಕ ಜಯಪ್ರಕಾಶ ಕೂಜುಗೋಡು, ಸಾಲಮನ್ನಾ ವಂಚಿತ ರೈತರಾದ ಶಂಕರ ನಾರಾಯಣ ಕೆ., ಈಶ್ವರ ಕೆ., ನರೇಂದ್ರ ಕೂಜುಗೋಡು, ಮೋಹನ ಕೆದಿಲ, ರಮೇಶ ಕೋನಡ್ಕ, ರಾಮಚಂದ್ರ ಭಟ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.