ಡಿಸಿಸಿ ಬ್ಯಾಂಕ್ ಚುನಾವಣೆ: ಕತ್ತಿ ಶಕ್ತಿ ಪ್ರದರ್ಶನ

| Published : Oct 09 2025, 02:01 AM IST

ಡಿಸಿಸಿ ಬ್ಯಾಂಕ್ ಚುನಾವಣೆ: ಕತ್ತಿ ಶಕ್ತಿ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಜಾರಕಿಹೊಳಿಯ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕುತ್ತೇವೆ. ವಿದ್ಯುತ್ ಸಂಘದ ಚುನಾವಣೆ ಬಳಿಕ ಇಲ್ಲೂ ನೂರಕ್ಕೆ ನೂರರಷ್ಟು ಮುಂದುವರಿಯುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಬುಧವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರಕ್ಕೆ ಆಗಮಿಸಿ, ಶಕ್ತಿ ಪ್ರದರ್ಶನ ನಡೆಸಿದರು. ಹುಕ್ಕೇರಿ ತಾಲೂಕಿನ ವಿವಿಧ ಪಿಕೆಪಿಎಸ್‌ಗಳ 52 ಸದಸ್ಯರು ಹಾಗೂ ಬೆಂಬಲಿಗರ ಜೊತಗೆ ಆಗಮಿಸಿ, ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಿಸಿ ಮತ್ತೊಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ ಕತ್ತಿ, ನಿನ್ನೆ ನಾಮಪತ್ರ ಸಲ್ಲಿಕೆ ವೇಳೆ ನಾನೇನು ಶಕ್ತಿ ಪ್ರದರ್ಶನ ಮಾಡಿಲ್ಲ. ನಮ್ಮ‌ ಪಿಕೆಪಿಎಸ್ ಸದಸ್ಯರು ಬ್ಯಾಂಕ್ ನೋಡುತ್ತೇವೆ ಎಂದು ಹೇಳಿದ ಹಿನ್ನೆಲೆಯಲ್ಲಿ ಅವರನ್ನು ಕರೆದುಕೊಂಡು ಬಂದಿದ್ದೇನೆ. ಅದನ್ನು ಬಿಟ್ಟರೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದರು.ತಮ್ಮ ವಿರುದ್ಧ 40 ಸದಸ್ಯರೊಂದಿಗೆ ಬಾಲಚಂದ್ರ ಜಾರಕಿಹೊಳಿ ಸಭೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನ್ನ ಉತ್ತರವೂ ಇಲ್ಲ, ಪತ್ರನೂ ಇಲ್ಲ. ಬ್ಯಾಂಕ್ ನೋಡಬೇಕು ಅಂದಿದಕ್ಕೆ ನಿರ್ದೇಶಕರನ್ನು ಕರೆದುಕೊಂಡು ಬಂದಿರುವೆ. ಸಭೆ ಮಾಡಲು ಎಲ್ಲರೂ ಸ್ವತಂತ್ರರು, ನಾನು ಐದಾರು ಬಾರಿ ಸಭೆ ಮಾಡಿದ್ದೇನೆ ಎಂದು ಹೇಳಿದರು.

ಈಗ 9ನೇ ಬಾರಿ ನಾಮಪತ್ರ ಸಲ್ಲಿಸುತ್ತಿದ್ದೇನೆ, ಸುದೀರ್ಘವಾಗಿ 40 ವರ್ಷ ಡಿಸಿಸಿ ಬ್ಯಾಂಕಿನಲ್ಲಿದ್ದೇನೆ. 10 ವರ್ಷ ನಿರ್ದೇಶಕ, 5 ವರ್ಷ ಉಪಾಧ್ಯಕ್ಷ ಮತ್ತು 25 ವರ್ಷಗಳ ಕಾಲ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವೆ. ಇಡೀ ರಾಜ್ಯದಲ್ಲೆ ಇದು ಕೂಡ ಒಂದು ರೀತಿ ದಾಖಲೆ ಆಗಿದೆ. ಇದು ಜಿಲ್ಲೆಯ ಎಲ್ಲ ಜನರ, ಸಹಕಾರಿಗಳ, ಬ್ಯಾಂಕ್ ಹಿರಿಯ-ಕಿರಿಯ ಸಿಬ್ಬಂದಿ ಸಹಕಾರದಿಂದ ಸಾಧ್ಯವಾಗಿದೆ. ನಿನ್ನೆ ಒಂದು ಸೆಟ್ ನಾಮಪತ್ರ ಸಲ್ಲಿಸಿದ್ದೆ, ಇಂದು ಮತ್ತೊಂದು ಸೆಟ್ ಮೂಲಕ ನಾಮಪತ್ರ ಸಲ್ಲಿಸಿದ್ದೇನೆ. ನಾನು ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಲ್ಲೂ ಅಗ್ರೆಸ್ಸಿವ್ ಆಗಿಯೇ ಇದ್ದೇನೆ ಎಂದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ ಕತ್ತಿ ನಾಯಕತ್ವ ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾಯಕತ್ವ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಆಯಾ ತಾಲೂಕಿನ ಸುಪುತ್ರರು ನಾಯಕತ್ವ ವಹಿಸಿಕೊಳ್ಳುತ್ತಾರೆ. ಹಿಂದೆಯೂ‌ ನಾನೇನು ನಾಯಕತ್ವ ವಹಿಸಿಕೊಂಡಿಲ್ಲ ಎಂದರು. ಜನರು ನನ್ನ ನಾಯಕತ್ವ ಬಯಸಿದರೆ ತಪ್ಪು ಎಂದು ಹೇಳಲಾಗದು. ಆದರೆ, ಆಯಾ ತಾಲೂಕಿನ ಜನ, ಪಿಕೆಪಿಎಸ್ ಸದಸ್ಯರು ಜವಾಬ್ದಾರಿ ತೆಗೆದುಕೊಂಡು ಒಳ್ಳೆಯ ಆಡಳಿತ ಮಂಡಳಿ ಆಯ್ಕೆ ಮಾಡಬೇಕು. ಪ್ರಚಾರಕ್ಕೆ ಯಾರೇ ಕರೆದರೂ ಹೋಗಿ ಬರುತ್ತೇನೆ ಎಂದರು. ಕನ್ಹೇರಿ ಮಠದಲ್ಲಿ ನಮ್ಮ ಸಮುದಾಯದ ಉಪಪಂಗಡಗಳ ಒಗ್ಗಟ್ಟಿನ ಕುರಿತಾಗಿ ಸಭೆ ನಡೆದಿದೆ ಹೊರತು ಅದರಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಅದು ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಸಭೆ. ಅದರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಹೇಳಿದರು.

ಜಾರಕಿಹೊಳಿಯ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕುತ್ತೇವೆ

ಹುಕ್ಕೇರಿ ವಿದ್ಯುತ್ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಜಾರಕಿಹೊಳಿಯ ಅಶ್ವಮೇಧ ಯಾಗದ ಕುದುರೆ ಕಟ್ಟಿ ಹಾಕುತ್ತೇವೆ. ವಿದ್ಯುತ್ ಸಂಘದ ಚುನಾವಣೆ ಬಳಿಕ ಇಲ್ಲೂ ನೂರಕ್ಕೆ ನೂರರಷ್ಟು ಮುಂದುವರಿಯುತ್ತದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಬ್ಯಾಂಕ್ ಮುಚ್ಚುವವರ ಕೈಗೆ ಅಧಿಕಾರ ಕೊಡಬೇಡಿ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಒಳ್ಳೆಯವರ ಕೈಯಲ್ಲಿ ಸಂಸ್ಥೆ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಮನೆ, ಅಂಗಡಿ, ಸೊಸೈಟಿ ಮಾಲೀಕ ಸೇರಿ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಒಳ್ಳೆಯವರಿದ್ದರೆ ಎಲ್ಲವೂ ವ್ಯವಸ್ಥಿತವಾಗಿ ಇರುತ್ತದೆ. ಹಾಗಾಗಿ, ಆ ಭಾವನೆಯಿಂದ ನಾನು ಹೇಳಿದ್ದೇನೆ. ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ನಾನು ಅಧ್ಯಕ್ಷನಾಗಿದ್ದೆ. ಜಿಲ್ಲೆಯ 50 ಲಕ್ಷ ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ಬ್ಯಾಂಕ್ ಅವಲಂಬಿಸಿದ್ದಾರೆ. ಯಾರ ಕೈಗೆ ಅಧಿಕಾರ ಕೊಟ್ಟರೆ ಒಳ್ಳೆಯದು ಎನ್ನುವುದನ್ನು ಜಿಲ್ಲೆಯ ಜನರು ನಿರ್ಣಯಿಸುತ್ತಾರೆ.