ಡಿಸಿಸಿ ಬ್ಯಾಂಕ್ ನೌಕರರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

| Published : Mar 29 2025, 12:30 AM IST

ಡಿಸಿಸಿ ಬ್ಯಾಂಕ್ ನೌಕರರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸರ್ಕಾರದ ಏಳನೇ ವೇತನ ಆಯೋಗದ ಅಂತಿಮ ಆದೇಶದಂತೆ ವೇತನ ಪರಿಷ್ಕರಿಸುವುದು. ಜುಲೈ ೨೦೨೩ರಿಂದ ಡಿಸೆಂಬರ್ ೨೦೨೩ರವರೆಗೆ ತಡೆಹಿಡಿದಿರುವ ಆರು ತಿಂಗಳ ತುಟ್ಟಿಭತ್ಯೆ ಬಾಕಿ ನೀಡುವುದು. ೨೦೨೩-೨೪ನೇ ಸಾಲಿನ ಎಕ್ಸ್‌ಗ್ರೇಷಿಯಾ, ಬೋನಸ್ ನೀಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ 62 ಡಿಸಿಸಿ ಬ್ಯಾಂಕ್ ಶಾಖೆಗಳ ನೌಕರರು ಶುಕ್ರವಾರ ಕಪ್ಪುಬಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ನ ಕೇಂದ್ರ ಕಚೇರಿಯ ನೌಕರರನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಶಾಖೆಯ ನೌಕರರು ಕಪ್ಪುಬಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ನೌಕರರು ಬ್ಯಾಂಕ್‌ನ ಆಡಳಿತ ಮಂಡಳಿ, ಮುಂದಿಟ್ಟಿರುವ ಒಂಬತ್ತು ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬ್ಯಾಂಕಿನ ಒಕ್ಕೂಟದ ಅಧ್ಯಕ್ಷ ಅಶ್ವಥ್ ಹಾಗೂ ಪ್ರಧಾನ ಕಾರ್ಯದರ್ಶಿ ಮರಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯಸರ್ಕಾರದ ಏಳನೇ ವೇತನ ಆಯೋಗದ ಅಂತಿಮ ಆದೇಶದಂತೆ ವೇತನ ಪರಿಷ್ಕರಿಸುವುದು. ಜುಲೈ ೨೦೨೩ರಿಂದ ಡಿಸೆಂಬರ್ ೨೦೨೩ರವರೆಗೆ ತಡೆಹಿಡಿದಿರುವ ಆರು ತಿಂಗಳ ತುಟ್ಟಿಭತ್ಯೆ ಬಾಕಿ ನೀಡುವುದು. ೨೦೨೩-೨೪ನೇ ಸಾಲಿನ ಎಕ್ಸ್‌ಗ್ರೇಷಿಯಾ, ಬೋನಸ್ ನೀಡಬೇಕು. ನೌಕರರ ಸಾಲಗಳ ಮೇಲೆ ೨೦೨೪ರ ಏಪ್ರಿಲ್‌ನಿಂದ ಹೆಚ್ಚಳ ಮಾಡಿರುವ ಬಡ್ಡಿದರವನ್ನು ರದ್ದುಪಡಿಸಿ ಶೇ.೧ರ ಬಡ್ಡಿದರದಲ್ಲಿ ನೀಡುವುದು. ನೌಕರರ ವರ್ಗಾವಣೆಯನ್ನು ಕೌನ್ಸಿಲಿಂಗ್, ನೌಕರರು ನೀಡುವ ಪಟ್ಟಿಯಲ್ಲಿ ಮೂರು ಶಾಖೆಗಳ ಒಂದು ಶಾಖೆಗೆ ವರ್ಗಾವಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ನೌಕರರ ಬೇಡಿಕೆಗಳು ಈಡೇರಿಸಲು ಅಸಾಧ್ಯವಾಗುವಂತಹ ಬೇಡಿಕೆಗಳಲ್ಲ. ಸಿಬ್ಬಂದಿ ವೆಚ್ಚವು ಬ್ಯಾಂಕಿನ ದುಡಿಯುವ ಬಂಡವಾಳದ ಶೇ.2ಕ್ಕಿಂತ ಕಡಿಮೆ ಇರಬೇಕು. ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಿದರೂ ಶೇ.2ಕ್ಕಿಂತ ಹೆಚ್ಚಾಗುವುದಿಲ್ಲ. ಬ್ಯಾಂಕ್‌ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಮಾರ್ಚ್‌ ಅಂತ್ಯಕ್ಕೆ ಲೆಕ್ಕಪತ್ರಗಳನ್ನು ಅಂತ್ಯಗೊಳಿಸಬೇಕಿರುವುದರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದೇವೆ. ಮುಂದೆಯೂ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಪ್ರತಿಭಟಿಸಲಾಗುವುದು ಎಂದರು.