ಡಿಸಿಸಿ ಬ್ಯಾಂಕ್ ಏಕ ವ್ಯಕ್ತಿಯ ಕಪಿಮುಷ್ಟಿಯಲ್ಲಿದೆ

| Published : Aug 26 2025, 01:02 AM IST

ಸಾರಾಂಶ

ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ಏಕ ವ್ಯಕ್ತಿಯ ಕಪಿಮುಷ್ಠಿಯಲ್ಲಿದ್ದು, ಇದರಿಂದ ಸಹಕಾರಿ ಕ್ಷೇತ್ರ ಅಭಿವೃದ್ಧಿಯಾಗದೆ ಅಧಃಪತನದತ್ತ ಸಾಗುತ್ತಿದೆ. ಆ. ೨೪ರ ಭಾನುವಾರ ನಡೆದ ಚುನಾವಣೆಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದಿದೆ ಎಂದು ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್ ಏಕ ವ್ಯಕ್ತಿಯ ಕಪಿಮುಷ್ಠಿಯಲ್ಲಿದ್ದು, ಇದರಿಂದ ಸಹಕಾರಿ ಕ್ಷೇತ್ರ ಅಭಿವೃದ್ಧಿಯಾಗದೆ ಅಧಃಪತನದತ್ತ ಸಾಗುತ್ತಿದೆ. ಆ. ೨೪ರ ಭಾನುವಾರ ನಡೆದ ಚುನಾವಣೆಯು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದಿದೆ ಎಂದು ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ ಆರೋಪಿಸಿದರು. ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಶಿರಾ ತಾಲೂಕಿನಿಂದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಿದ್ದೆ. ನನಗೆ ೧೦ ಮಂದಿ ಮತ ಚಲಾಯಿಸಿದ್ದು ಹೆಮ್ಮೆಯ ಸಂಗತಿ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಶಿರಾ ತಾಲೂಕಿನಲ್ಲಿ ಒಟ್ಟು ೨೮ ಡೆಲಿಗೆಟ್ಸ್‌ಗಳು ಇದ್ದು ಅದರಲ್ಲಿ ಸುಮಾರು ೨೫ ಡೆಲಿಗೇಟ್ಸ್‌ಗಳಿಗೆ ಕೇವಲ ಮತದಾನದ ಹಕ್ಕನಷ್ಟೇ ನೀಡಿ ಅವರು ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಕಸಿದಿದ್ದಾರೆ. ಇದಕ್ಕೆ ಒಂದು ತಿಂಗಳ ಮೊದಲೇ ಸಭಾ ನಡವಳಿಗಳನ್ನು ನಡೆಸಿ ಏಕಪಕ್ಷೀಯವಾಗಿ ತೀರ್ಮಾನ ಮಾಡಿಕೊಂಡು ಸದಸ್ಯರಿಂದ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಸಿದರು. ಈ ರೀತಿಯಾದರೆ ಇದು ಸಹಕಾರಿ ಕ್ಷೇತ್ರದಲ್ಲಿ ಅವ್ಯವಸ್ಥೆಯಾದಂತೆ ಆಗುತ್ತದೆ. ಸಹಕಾರಿ ಕ್ಷೇತ್ರ ಅಭಿವೃದ್ಧಿಯಾಗುವುದಿಲ್ಲ ಇದಕ್ಕಾಗಿ ಮುಂದಿನ ದಿನಗಳಲ್ಲಿ ನಾವು ಹೋರಾಡುತ್ತೇವೆ ಎಂದರು. ರಾಜ್ಯ ಜೆಡಿಎಸ್ ಪರಿಷತ್ ಸದಸ್ಯ ಆರ್.ಉಗ್ರೇಶ್ ಮಾತನಾಡಿ, ಮತದಾನದ ಬಗ್ಗೆ ಆದ ಅವ್ಯವಸ್ಥೆ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಸೋಲಿನಿಂದ ಯಾವುದೇ ಕಾರಣಕ್ಕೂ ಧೃತಿಗೆಡುವುದಿಲ್ಲ. ಅಧಿಕಾರ ಶಾಶ್ವತವಲ್ಲ, ಪಕ್ಷದ ಪರವಾಗಿ ಹೋರಾಟ ಮಾಡುತ್ತೇವೆ ಎಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಚುನಾವಣೆಯಲ್ಲಿ ಮತದಾನ ಮಾಡಲು ಡೆಲಿಗೇಟ್ಸ್‌ಗಳಿಗೆ ಕೊನೆಯ ದಿನದವರೆಗೂ ಮತದಾನದ ಚೀಟಿ ನೀಡದೆ ಕೆಲವೆ ಗಂಟೆಗಳ ಹಿಂದೆ ನೀಡಲಾಗಿದೆ. ಅವರು ಸ್ವತಂತ್ರವಾಗಿ ಮತದಾನ ಮಾಡಲು ಅವಕಾಶ ನೀಡಿಲ್ಲ. ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಶಾಸಕ ಟಿ.ಬಿ.ಜಯಚಂದ್ರ ಇವರಿಬ್ಬರ ಹತೋಟಿ ಇದ್ದರೂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಎಸ್.ಆರ್.ಗೌಡ ಅವರು ೧೦ ಮತಗಳನ್ನು ಪಡೆದಿದ್ದಾರೆ. ಇದು ನಮ್ಮ ಆರಂಭಿಕ ಗೆಲುವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿ ಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಾಶಾಮಯ್ಯ, ಮಾಜಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಟಿ ಡಿ ಮಲ್ಲೇಶ್, ಟಿ ಡಿ ನರಸಿಂಹಮೂರ್ತಿ, ಯುವ ಜೆಡಿಎಸ್ ಘಟಕ ಅಧ್ಯಕ್ಷ ಗೋಪಿಕುಂಟೆ ಪುನೀತ್ ಗೌಡ, ಮುಖಂಡರಾದ ಮುದ್ದು ಗಣೇಶ್, ರಂಗನಾಥ, ಈರಣ್ಣ, ಶ್ರೀಧರ್, ಸುನಿಲ್ ಕುಮಾರ್, ಮಹಾದೇವ್, ಮೂರ್ತಣ್ಣ ಸೇರಿದಂತೆ ಹಲವರು ಹಾಜರಿದ್ದರು.