ಸಾರಾಂಶ
ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅ.19ರಂದು ನಡೆಯಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಇದೀಗ ಮತ್ತಷ್ಟು ರಂಗು ಪಡೆದಿದೆ. ಗುರುವಾರ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.ಶಾಸಕ ಬಾಲಚಂದ್ರ ಜಾರಕಿಹೊಳಿ ಪೆನಲ್‌ನ 7 ಅಭ್ಯರ್ಥಿಗಳು ಏಕಕಾಲಕ್ಕೆ ಸಾಮೂಹಿಕವಾಗಿ ನಾಮಪತ್ರ ಸಲ್ಲಿಸಿದರು. ನಿಪ್ಪಾಣಿನಿಂದ ಅಣ್ಣಾಸಾಹೇಬ ಜೊಲ್ಲೆ, ಬೈಲಹೊಂಗಲದಿಂದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ್, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ್, ಸವದತ್ತಿಯಿಂದ ವಿರೂಪಾಕ್ಷ ಮಾಮನಿ, ರಾಯಬಾಗದಿಂದ ಅಪ್ಪಾಸಾಹೇಬ ಕುಲಗುಡೆ, ಯರಗಟ್ಟಿಯಿಂದ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಹಾಗೂ ಕಿತ್ತೂರಿನಿಂದ ವಿಕ್ರಮ ಇನಾಮದಾರ ನಾಮಪತ್ರ ಸಲ್ಲಿಸಿದರು.
ಬಾಲಚಂದ್ರ ಜಾರಕಿಹೊಳಿ ಪೆನಲ್ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ರಾಮದುರ್ಗ ತಾಲೂಕಿನಿಂದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ನಾಮಪತ್ರ ಸಲ್ಲಿಸಿದರು. ಜಾರಕಿಹೊಳಿ ಪೆನಲ್‌ನಲ್ಲಿ ಅವಕಾಶಕ್ಕೆ ಮಹಾದೇವಪ್ಪ ಯಾದವಾಡ ಮನವಿ ಮಾಡಿದ್ದರು. ಆದರೆ, ತಮಗೆ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಮಲ್ಲಣ್ಣ ಯಾದವಾಡ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದರು. ಮಾಜಿ ಸಂಸದ ರಮೇಶ ಕತ್ತಿ ಸೇರಿದಂತೆ ಎಲ್ಲರ ಸಹಕಾರ ಪಡೆದು ಸ್ಪರ್ಧೆ ಮಾಡಲಾಗಿದೆ ಎಂದು ಮಲ್ಲಣ್ಣ ಯಾದವಾಡ ಹೇಳಿದರು.ಚಿಕ್ಕೋಡಿ ತಾಲೂಕಿನಿಂದ ಶಾಸಕ ಗಣೇಶ ಹುಕ್ಕೇರಿ ನಾಮಪತ್ರ ಸಲ್ಲಿಸಿದ್ದಾರೆ. ಹುಕ್ಕೇರಿ ಅವರನ್ನು ಅವಿರೋಧವಾಗಿ ಆಯ್ಕೆಗೆ ರಮೇಶ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ ಎರಡೂ ಬಣ ಮುಂದಾಗಿವೆ. ಹಾಗಾಗಿ, ಗಣೇಶ ಹುಕ್ಕೇರಿ ಅವರನ್ನು ಬಹುತೇಕವಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.
ಕಿತ್ತೂರು ತಾಲೂಕಿನಿಂದ ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಪಾಟೀಲ ನಾಮಪತ್ರ ಸಲ್ಲಿಸಿದರು. ರಾಮದುರ್ಗ ತಾಲೂಕಿನಿಂದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ತಮ್ಮ ಬೆಂಬಲಿಗರೊಂದಿಗೆ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಮೂಲಕ ರಾಮದುರ್ಗ ತಾಲೂಕಿನ ಮತ್ತೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಿದ್ದಾಜಿದ್ದಿ ಕಾಳಗ ಏರ್ಪಡುವ ಸಾಧ್ಯತೆಗಳಿವೆ. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಸಹೋದರ ಮಲ್ಲಣ್ಣ ಯಾದವಾಡ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಅಶೋಕ ಪಟ್ಟಣ ನಾಮಪತ್ರ ಸಲ್ಲಿಸಿದರು. ತಾಲೂಕಿನ ರೈತರ ಒತ್ತಾಸೆಯ ಮೇರೆಗೆ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನನ್ನದು ಯಾರ ಪೆನಲ್ ಇಲ್ಲ. ಸಿದ್ದರಾಮಯ್ಯ ಪೆನಲ್ ಎಂದು ಹೇಳುವ ಮೂಲಕ ಅಶೋಕ ಪಟ್ಟಣ ಅರು ಬಾಲಚಂದ್ರ ಜಾರಕಿಹೊಳಿ ಪೆನಲ್‌ಗೆ ತಿರುಗೇಟು ನೀಡಿದರು.