ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಯಮಿತ ಮಡಿಕೇರಿ ಇದರ ಗ್ರಾಹಕರ ಕುಂದು ಕೊರತೆ ಸಭೆ ಬ್ಯಾಂಕ್‌ನ ಮುಖ್ಯ ಕಚೇರಿ ಶಾಖೆ ಹಾಗೂ ಕಾಲೇಜು ರಸ್ತೆ ಶಾಖೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಕೊಡಂದೇರ ಪಿ. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಕಚೇರಿ ಶಾಖೆಯಲ್ಲಿ 60 ಹಾಗೂ ಕಾಲೇಜು ರಸ್ತೆ ಶಾಖೆಯಲ್ಲಿ 63 ಗ್ರಾಹಕರು ಹಾಜರಿದ್ದರು. ಸಭೆಯಲ್ಲಿ ಗ್ರಾಹಕರು ಬ್ಯಾಂಕ್‌ನಲ್ಲಿ ಗ್ರಾಹಕರಿಗೆ ಸಿಗುವ ವಿವಿಧ ರೀತಿಯ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

ಎರಡೂ ಶಾಖೆಗಳಲ್ಲಿ ಗ್ರಾಹಕರು ಬ್ಯಾಂಕ್‌ನ ಅಭಿವೃದ್ಧಿ ಬಗ್ಗೆ, ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಉತ್ತಮ ಕಾರ್ಯವೈಖರಿ ಹಾಗೂ ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಹಕರು ಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಬ್ಯಾಂಕ್‌ನ ಅಧ್ಯಕ್ಷರು ಸಮಜಾಯಿಷಿಕೆ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಬ್ಯಾಂಕ್‌ನ ಪ್ರಗತಿಯ ಅಂಕಿ ಅಂಶಗಳನ್ನು ನೀಡಿದರು. ಗ್ರಾಹಕರು ಬ್ಯಾಂಕ್‌ನ ಪ್ರಗತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.


ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಮಾತನಾಡಿ, 105 ವರ್ಷಗಳ ಇತಿಹಾಸವಿರುವ ಕೊಡಗು ಡಿಸಿಸಿ ಬ್ಯಾಂಕ್‌ ಜಿಲ್ಲೆಯಲ್ಲಿರುವ ವಿವಿಧ 23 ಬ್ಯಾಂಕ್‌ಗಳ ಪೈಕಿ ಠೇವಣಾತಿ ಸಂಗ್ರಹಣೆ ಹಾಗೂ ಸಾಲ ವಿತರಣೆಯಲ್ಲಿ ಅಗ್ರ ಸ್ಥಾನದಲ್ಲಿರುವುದಾಗಿ ಹಾಗೂ ಸಾಲ ವಸೂಲಾತಿಯಲ್ಲಿ ಶೇ. 98ರಷ್ಟು ಸಾಧನೆ ಮಾಡಿರುವುದಾಗಿ ತಿಳಿಸಿದರು.

ಜಿಲ್ಲೆಯ ರೈತರು, ಠೇವಣಿದಾರರು ಹಾಗೂ ಸಹಕಾರ ಸಂಘಗಳ ಸಹಕಾರದಿಂದ ಬ್ಯಾಂಕ್‌ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಬ್ಯಾಂಕ್‌ನ ಎನ್‍ಪಿಎ ಗಣನೀಯವಾಗಿ ಇಳಿಕೆಯಾಗಿದ್ದು, ನಿವ್ವಳ ಎನ್‍ಪಿಎ ಶೂನ್ಯವಾಗಿದೆ ಎಂದು ಸಭೆಗೆ ತಿಳಿಸಿದರು. ಗ್ರಾಹಕರ ಕುಂದು ಕೊರತೆ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸುತ್ತಿದ್ದು, ಬ್ಯಾಂಕ್‌ನ ಎಲ್ಲ್ಲ26 ಶಾಖೆಗಳಲ್ಲಿಯೂ ಸ್ಥಳೀಯ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬ್ಯಾಂಕ್‌ನ ನಿರ್ದೆಶಕರಾದ ಹೊಸೂರು ಸತೀಶ್‍ ಕುಮಾರ್, ಕಾಂಗೀರ ಸತೀಶ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣವಟ್ಟಿರ ಬೆಳ್ಯಪ್ಪ, ಶಾಖಾ ಸಿಬ್ಬಂದಿ ಹಾಜರಿದ್ದರು.