ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಕಳೆದ 9 ದಿನಗಳಲ್ಲಿ ನಿರಂತರವಾಗಿ ೨೧೬ ಗಂಟೆ ಭರತನಾಟ್ಯ ಪ್ರದರ್ಶಿಸಿ ಬ್ರಹ್ಮಾವರ ತಾಲೂಕು ಮುಂಡ್ಕಿನಜೆಡ್ಡಿನ ವಿದುಷಿ ದೀಕ್ಷಾ ಶನಿವಾರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ.ನಗರದ ಸೈಂಟ್ ಸಿಸಿಲಿ ಶಾಲೆಯಲ್ಲಿ ಈ ದಾಖಲೆಯನ್ನು ನಿರ್ಮಿಸಿದ ಅವರನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಭೇಟಿ ಮಾಡಿ ಅವರನ್ನು ಗೌರವಿಸಿ ಅಭಿನಂದಿಸಿದರು.ನಾಡೋಜ ಡಾ.ಜಿ.ಶಂಕರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಮಾಜಿ ಶಾಸಕ ಕೆ.ರಘುಪತಿ ಭಟ್, ತಂದೆ ವಿಠಲ ಪೂಜಾರಿ, ತಾಯಿ ಶುಭಾ, ಪತಿ ರಾಹುಲ್, ಡಿಸಿ ಸ್ವರೂಪ ಟಿ.ಕೆ. ಮೊದಲಾದವರಿದ್ದರು.ವಿದುಷಿ ದೀಕ್ಷಾ ಆ.೨೧ರಂದು ಪ್ರತೀ ಮೂರು ಗಂಟೆಗೆ ೧೫ ನಿಮಿಷಗಳ ವಿರಾಮ ನಿಯಮಕ್ಕನುಗುಣವಾಗಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದರು. ದೀಕ್ಷಾ, ಕಳೆದ ಗುರುವಾರ ಮಂಗಳೂರಿನ ರೆಮೋನಾ ಅವರ ೧೨೭ ಗಂಟೆಗಳ ದಾಖಲೆಯನ್ನು ಮುರಿದು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಬರೆದಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಹೆಡ್ ಮನೀಶ್ ಬಿಷ್ಣೋಯ್ ಅವರು ದೀಕ್ಷಾ ದಾಖಲೆ ಮಾಡಿರುವುದಾಗಿ ಘೋಷಿಸಿದರು. ಆದರೆ ದೀಕ್ಷಾ ಅಲ್ಲಿಗೆ ನೃತ್ಯವನ್ನು ನಿಲ್ಲಿಸದೇ ಇದೀಗ 216 ಗಂಟೆಗಳ ಕಾಲ ನರ್ತಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.