ಹನೂರಿನಲ್ಲಿ ಡಿಸಿಎಂ ಡಿಕೆಶಿಗೆ ಸನ್ಮಾನ

| Published : Apr 24 2025, 11:47 PM IST

ಸಾರಾಂಶ

ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ತೆರಳುವ ವೇಳೆ ಹನೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಿದರು.

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ತೆರಳುವ ವೇಳೆ ಹನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸನ್ಮಾನಿಸಿದರು.

ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹನೂರು ಪಟ್ಟಣಕ್ಕೆ ಉಪಮುಖ್ಯಮಂತ್ರಿ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಪಪಂ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಶಾಲು ಹಾರಹಾಕಿ ಸನ್ಮಾನಿಸಿದರು. ಈ ವೇಳೆ ಪಕ್ಷದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಂದು ಘೋಷಣೆ ಕೂಗಿದ್ದಲ್ಲದೆ ಡಿಕೆ ಡಿಕೆ ಎಂದು ಘೋಷಣೆ ಕೂಗಿ ಸಂತಸಪಟ್ಟರು. ಬಳಿಕ ಸಾರ್ವಜನಿಕರಿಗೆ ಕೈಮುಗಿದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದರು.

ಈಡುಗಾಯಿ ಒಡೆದು ಹರಕೆ ಸಲ್ಲಿಸಿದ ಡಿಕೆಶಿ:

ಕರ್ನಾಟಕ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ನಂತರ ಮೊಟ್ಟಮೊದಲ ಬಾರಿಗೆ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರಿಂದ ತಾಳುಬೆಟ್ಟದಲ್ಲಿ ಈಡುಗಾಯಿ ಒಡೆದು ತಮ್ಮ ಹರಕೆ ಸಮರ್ಪಿಸಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಶಾಸಕ ಎಂ.ಆರ್ ಮಂಜುನಾಥ್, ಪ್ರಾಧಿಕಾರದ ಕಾರ್ಯದರ್ಶಿ ಎಈ ರಘು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಸಚಿವ ಸಂಪುಟ ಸಭೆ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ 108 ಅಡಿ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿರುವ ಮ್ಯೂಸಿಯಂಗೆ ತೆರಳಿ ಮಹದೇಶ್ವರ ಪವಾಡಗಳನ್ನು ವೀಕ್ಷಣೆ ಮಾಡಿ ಪ್ರಾಧಿಕಾರದ ಕಾರ್ಯದರ್ಶಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಜಿ ಶಾಸಕ ಆರ್ ನರೇಂದ್ರ, ಜಿಲ್ಲಾಧಿಕಾರಿ ಸಿಟಿ ಶಿಲ್ಪಾನಾಗ್ ಹಾಜರಿದ್ದರು.