ನೀರಿನಿಂದ ಆರೋಗ್ಯ ಸಮಸ್ಯೆ ಅದರೆ ಅಧಿಕಾರಿಗಳೇ ಹೊಣೆ

| Published : May 25 2024, 01:33 AM IST / Updated: May 25 2024, 08:40 AM IST

DK shivakumar
ನೀರಿನಿಂದ ಆರೋಗ್ಯ ಸಮಸ್ಯೆ ಅದರೆ ಅಧಿಕಾರಿಗಳೇ ಹೊಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಗುಣಮಟ್ಟದ ಕುಡಿಯುವ ನೀರು ಕೊಡಿ ಎಂದು ಮಹಾನಗರ ಪಾಲಿಕೆ, ಡಿಸಿ, ಜಿಪಂ ಸಿಇಒಗೆ ಡಿಸಿಎಂ ಪತ್ರ ಬರೆದಿದ್ದಾರೆ.

 ಬೆಂಗಳೂರು :  ನಗರದ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಒಂದು ವೇಳೆ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಲಮಂಡಳಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಶಿವಕುಮಾರ್, ರಾಜ್ಯದ ಕೆಲವು ಕಡೆ ಕಲುಷಿತ ನೀರು ಕುಡಿಯುವ ನೀರಿನ ಜತೆ ಮಿಶ್ರವಾಗಿ ಜನರು ಅಸ್ವಸ್ಥಗೊಂಡು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ವಿಚಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಸಭೆಯಲ್ಲಿ ಚರ್ಚೆಯಾಗಿದೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆ, ಉತ್ತಮ ಗುಣಮಟ್ಟದ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಆ ಘಟಕಗಳಿಂದ ಸರಬರಾಜು ಆಗುತ್ತಿರುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಕುಡಿಯಲು ಯೋಗ್ಯವೇ ಎಂದು ಖಚಿತಪಡಿಸಿಕೊಳ್ಳಬೇಕು.

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.