ಕಾಂಗ್ರೆಸ್‌ ಕಚೇರಿಗೆ ಡಿಸಿಎಂ ಡಿಕೆಶಿ ಅನಿರೀಕ್ಷಿತ ಭೇಟಿ

| Published : May 05 2025, 12:46 AM IST

ಕಾಂಗ್ರೆಸ್‌ ಕಚೇರಿಗೆ ಡಿಸಿಎಂ ಡಿಕೆಶಿ ಅನಿರೀಕ್ಷಿತ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಶ್ವಾಪುರದ ಸರ್ವೋದಯ ಸರ್ಕಲ್‌ನಲ್ಲಿರುವ ಪಕ್ಷಕ್ಕೆ ಮೀಸಲಾದ ನಿವೇಶನದ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಮುಖಂಡ ನಾಗರಾಜ ಗೌರಿ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಅವರು ನಿವೇಶನದ ನಕಾಶೆಯನ್ನು ತೋರಿಸಿ ವಸ್ತುಸ್ಥಿತಿಯನ್ನು ವಿವರಿಸಿದರು.

ಹುಬ್ಬಳ್ಳಿ: ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಗರದ ಕಾಂಗ್ರೆಸ್ ಕಚೇರಿಗೆ ಭಾನುವಾರ ಅನಿರೀಕ್ಷಿತ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಔಪಚಾರಿಕ ಚರ್ಚೆ ನಡೆಸಿದರು. ಇದಲ್ಲದೇ ಕಾಂಗ್ರೆಸ್‌ಗೆ ಸಂಬಂಧಿಸಿ ನಿವೇಶನ, ಆಸ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.

ಕೇಶ್ವಾಪುರದ ಸರ್ವೋದಯ ಸರ್ಕಲ್‌ನಲ್ಲಿರುವ ಪಕ್ಷಕ್ಕೆ ಮೀಸಲಾದ ನಿವೇಶನದ ಸ್ಥಳಕ್ಕೆ ತೆರಳಿ ವೀಕ್ಷಣೆ ನಡೆಸಿದರು. ಮುಖಂಡ ನಾಗರಾಜ ಗೌರಿ ಹಾಗೂ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಅವರು ನಿವೇಶನದ ನಕಾಶೆಯನ್ನು ತೋರಿಸಿ ವಸ್ತುಸ್ಥಿತಿಯನ್ನು ವಿವರಿಸಿದರು.

ಬಳಿಕ ಸರ್ ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಮಹಾನಗರ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು. ನೂತನ ಕಚೇರಿ ಕಟ್ಟಡ ನಿರ್ಮಾಣದ ಬಗ್ಗೆ ಮಾತನಾಡಿದರು. ‘ಈ ನಿವೇಶನ ಕಬ್ಜಾ ತಗೆದುಕೊಂಡ ಮೇಲೆ ಬಿಜೆಪಿಯವರು ಹಾಗೂ ಜೆಡಿಎಸ್‌ನವರು ಪ್ರತ್ಯೇಕವಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾವೂ ದಾಖಲೆಗಳೊಂದಿಗೆ ವಕೀಲರ ಮೂಲಕ ಕೋರ್ಟ್‌ಗೆ ಮನವರಿಕೆ ಮಾಡಿದ್ದೇವೆ’ಎಂದು ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ತಿಳಿಸಿದರು.

ಈ ಬಗ್ಗೆ ಅಚ್ಚರಿಗೊಳಗಾದ ಕೆಪಿಸಿಸಿ ಅಧ್ಯಕ್ಷರು, ಇಂಥ ವಿಷಯಗಳನ್ನು ಕೂಡಲೇ ಕೇಂದ್ರ ಕಚೇರಿಗೆ ತಿಳಿಸಬೇಕು ಎಂದು ಹೇಳಿ ಅಸಮಾಧಾನ ಹೊರಹಾಕಿದರು. ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸುವಂತೆ ಹೇಳಿದ ಡಿಸಿಎಂ, ಕೆಲ ವಕೀಲರ ಹೆಸರನ್ನು ಸೂಚಿಸಿ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಮುಖಂಡರಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಬಸವರಾಜ ಗುರಿಕಾರ, ಯುಸೂಫ್‌ ಸವಣೂರ, ವೀರಣ್ಣ ಹಿರೇಹಾಳ ಸೇರಿದಂತೆ ಹಲವರು ಇದ್ದರು.