ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಜೀವ ಉಳಿಸುಕೊಳ್ಳುವಂತೆ ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎಂ. ಮುತ್ತುರಾಜು ಕರೆ ನೀಡಿದರು.ನಗರದ ಅರಮನೆ ಕೋಟೆ ಆಂಜನೇಯ ದೇವಸ್ಥಾನದ ಮುಂಭಾದಲ್ಲಿ ನಗರ ಪೊಲೀಸ್ಘಟಕದ ಸಂಚಾರ ಉಪ ವಿಭಾಗವು ರಸ್ತೆ ಸುರಕ್ಷತಾ ಸಪ್ತಾಹ- 2024ರ ಅಂಗವಾಗಿ ಗುರುವಾರ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ಸುರಕ್ಷತೆಗಾಗಿ ಸಂಚಾರ ನಿಯಮ ರೂಪಿಸಲಾಗಿದೆ. ಅವುಗಳನ್ನು ಉಲ್ಲಂಘಿಸಿ ಪ್ರಾಣಕ್ಕೆ ತೊಂದರೆ ತಂದುಕೊಳ್ಳದಿರಿ ಎಂದು ಎಚ್ಚರಿಸಿದರು.
ನಿಯಮಗಳ ಪಾಲನೆಯಿಂದ ಅಪಘಾತದ ವೇಳೆ ಜೀವ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸಾವಿಗೀಡಾದಲ್ಲಿ ತಮ್ಮ ಕುಟುಂಬ ಬೀದಿಗೆ ಬೀಳಬೇಕಾಗುತ್ತದೆ ಎಂಬ ಎಚ್ಚರಿಕೆ ವಾಹನ ಚಲಾಯಿಸುವಾಗ ಇರಬೇಕು ಎಂದರು.ನಗರ ಸಂಚಾರ ಉಪ ವಿಭಾಗದ ಎಸಿಪಿ ಪರಶುರಾಮಪ್ಪ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಅಪಘಾತದಲ್ಲಿ 168 ಮಂದಿ ಮೃತಪಟ್ಟಿದ್ದು, 985 ಮಂದಿ ಗಾಯಗೊಂಡಿದ್ದಾರೆ. ಇವನ್ನು ಗಮನಿಸಿಯಾದರೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ಬೈಕ್ ರ್ಯಾ ಲಿ ಗನ್ ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್ ಬಿ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಅಶೋಕ ರಸ್ತೆ ಮೂಲಕ ಸಾಗಿ ಅರಮನೆ ಮುಂಭಾಗ ಅಂತ್ಯವಾಯಿತು.ನೂರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು. ಎಲ್ ಇಡಿ ಮೂಲಕ ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಯಿತು.
ಇದೇ ವೇಳೆ 84ನೇ ವಯಸ್ಸಿನಲ್ಲೂ ಟ್ರಾಫಿಕ್ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಅವರನ್ನು ಸನ್ಮಾನಿಸಲಾಯಿತು.ಡಿಸಿಪಿ ಎಸ್. ಜಾಹ್ನವಿ, ಎಸಿಪಿಗಳಾದ ಅಶ್ವಥ್ಥನಾರಾಯಣ, ಗಜೇಂದ್ರಪ್ರಸಾದ್ ಮೊದಲಾದವರು ಇದ್ದರು.ಸಂಚಾರ ನಿಯಮ ರೂಪಿಸಿರುವುದು ದಂಡ ವಸೂಲಿಗಾಗಿ ಎಂಬ ಭಾವನೆ ಬೇಡ. ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಮೂವರು ಕುಳಿತು ವಾಹನ ಚಾಲನೆ ಮಾಡುವುದು, ವೀಲಿಂಗ್, ಸಿಗ್ನಲ್ ಜಂಪ್ ಮುಂತಾದವುಗಳಿಂದ ಸವಾರರು ಅಪಾಯಕ್ಕೆ ಒಳಗಾಗುತ್ತಾರೆ. ಅವು ನಿಮ್ಮ ಜೀವಕ್ಕೇ ಆಪತ್ತು ತರುತ್ತದೆ. ಹೀಗಾಗಿ, ಸಂಚಾರ ನಿಯಮಗಳನ್ನು ಪಾಲಿಸಿ.
- ಎಂ. ಮುತ್ತುರಾಜು, ಡಿಸಿಪಿ