ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮಣಿ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡಿ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಕಳೆದ ಏಪ್ರಿಲ್ 28 ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ನುಗ್ಗಿ ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶಿಸಿದ್ದರು. ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ನಾರಾಯಣ ಬರಮನಿ ಅವರ ವಿರುದ್ಧ ಕಿಡಿಕಾರಿ, ಅವರನ್ನು ಹೊಡೆಯಲು ಕೈ ಎತ್ತಿದ್ದರು. ಮುಖ್ಯಮಂತ್ರಿ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಘಟನೆ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಗೆ ಕಾರಣವಾಗಿತ್ತು. ಆಡಳಿತ ಪಕ್ಷದ ನಾಯಕರ ವಿರುದ್ಧ ವಿರೋಧ ಪಕ್ಷದ ನಾಯಕರು ಗಂಭೀರ ಆರೋಪವನ್ನು ಮಾಡಿ, ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು.ಅವಮಾನಕ್ಕೆ ಬೇಸತ್ತು ಸ್ವಯಂ ನಿವೃತ್ತಿಗೆ ಎಸಿಪಿ ನಾರಾಯಣ ಬರಮಣಿ ಅವರು ಮುಂದಾಗಿದ್ದರು. ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಬರಮಣಿ ಅವರ ಮನವೊಲಿಸಿದ್ದರು. ಇದರ ಬೆನ್ನಲ್ಲೇ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದ ಬರಮಣಿ ಅವರಿಗೆ ಬೆಳಗಾವಿ ಡಿಸಿಪಿಯಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಂದು ಬೆಳಗಾವಿಯಲ್ಲೇ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಯಾಗಿದ್ದ ಎಎಸ್‌ಪಿ ಭರಮಣಿ ಗುರಿಯಾಗಿದ್ದರು. ಈಗ ಬೆಳಗಾವಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಡಿಸಿಪಿ ಹುದ್ದೆ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ಅವರು ಬೆಳಗಾವಿಯಲ್ಲಿ ಎಸಿಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.ಪ್ರಮುಖವಾಗಿ ಯಳ್ಳೂರ ಗ್ರಾಮದ ಹೊರವಲಯಲ್ಲಿದ್ದ ಮಹಾರಾಷ್ಟ್ರ ರಾಜ್ಯ ನಾಮಫಲಕ ತೆರವುಗೊಳಿಸುವಲ್ಲಿ, ರೌಡಿಶೀಟರ್ ಪ್ರವೀಣ ಶಿಂತ್ರೆ ಎನ್‌ಕೌಂಟರ್, ಗಡಿ ಗಲಾಟೆ ನಿಯಂತ್ರಿಸುವಲ್ಲಿ ನಾರಾಯಣ ಬರಮಣಿ ಪ್ರಮುಖ ಪಾತ್ರ ವಹಿಸಿದ್ದರು.ಸರ್ಕಾರ ನನ್ನನ್ನು ಡಿಸಿಪಿ ಮಾಡಿ ಬೆಳಗಾವಿಗೆ ವರ್ಗಾವಣೆ ಮಾಡಿದ್ದು, ನನಗೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡಲು ಅವಕಾಶ ನೀಡಿದೆ. ನನಗೆ ಬೆಳಗಾವಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಎಲ್ಲ ಹಿರಿಯ ಅಧಿಕಾರಿಗಳ ಸಲಹೆ ಸೂಚನೆ ಮೇರೆಗೆ ಕೆಲಸ ನಿರ್ವಹಿಸುತ್ತೇನೆ.
ನಾರಾಯಣ ಬರಮಣಿ, ನೂತನ ಡಿಸಿಪಿ.