ಸಾರಾಂಶ
ಕೊಳ್ಳೇಗಾಲದ ಫೇಕ್ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ, ತರಬೇತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿ ವಿವಾದಕ್ಕೆ ಸಿಲುಕಿರುವ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರಿಗೆ ಈಗ 113 ಶಾಲೆಗಳಿಗೆ ಮಾನ್ಯತೆ ನವೀಕರಣ ವಿಚಾರದಲ್ಲಿ ಇಲಾಖೆ ನಿಯಮ ಉಲ್ಲಂಘಸಿ ಕರ್ತವ್ಯ ಲೋಪ ಎಸಗುವ ಮೂಲಕ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಇಲಾಖೆ ನಿಯಮ ಉಲ್ಲಂಘಿಸಿ, ಸರ್ಕಾರದ ಗಮನಕ್ಕೆ ತರದೆ ಕೊಳ್ಳೇಗಾಲದ ಶ್ರೀನಿವಾಸ ಟಾಕೀಸ್ ರಸ್ತೆಯ ಬಳಿ ಫೇಕ್ ಅಬ್ದುಲ್ ಕಲಾಂ ಸಂಸ್ಥೆಗೆ ಯೋಗ, ತರಬೇತಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿ ವಿವಾದಕ್ಕೆ ಸಿಲುಕಿರುವ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರಿಗೆ ಈಗ 113 ಶಾಲೆಗಳಿಗೆ ಮಾನ್ಯತೆ ನವೀಕರಣ ವಿಚಾರದಲ್ಲಿ ಇಲಾಖೆ ನಿಯಮ ಉಲ್ಲಂಘಸಿ ಕರ್ತವ್ಯ ಲೋಪ ಎಸಗುವ ಮೂಲಕ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ.2024, 2025ನೇ ಸಾಲಿನಲ್ಲಿ ನಿಯಮ ಬಾಹಿರವಾಗಿ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ವಿಚಾರದಲ್ಲಿ ಡಿಡಿಪಿಐ ಕರ್ತವ್ಯ ಲೋಪ ಎಸಗಿದ್ದು ಪರಿಶೀಲಿಸಿ ಕ್ರಮವಹಿಸುವಂತೆ ದಾಖಲೆ ಸಮೇತ ನಿರಂಜನ್ ಎಂಬುವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಇನ್ನಿತರರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಡಿಡಿಪಿಐ ಅವರು 9 ಶಾಲೆಗಳಿಗೆ ಪ್ರಥಮ ಮಾನ್ಯತೆ, 113 ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿರುವುದು ಕಂಡು ಬಂದಿದೆ. ಈ ಪೈಕಿ 25 ಶಾಲೆಗಳಿಗೆ 10 ವರ್ಷಕ್ಕೆ, 86 ಶಾಲೆಗಳಿಗೆ 1ವರ್ಷಕ್ಕೆ ಮಾನ್ಯತೆ ನವೀಕರಣ ಮಾಡಿರುತ್ತಾರೆ ಮತ್ತು 9 ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿರುತ್ತಾರೆ. ಮಾನ್ಯತೆ ನೀಡುವ ವೇಳೆ ಆನ್‌ಲೈನ್‌ನಲ್ಲಿ ಇಲಾಖೆಯ ಕಾನೂನು ನಿಯಮ ಮೀರಿ, ಆದೇಶ ಸೂಚನೆಗಳನ್ನು ಗಾಳಿಗೆ ತೂರಿ, ಸಮರ್ಪಕ ದಾಖಲೆ, ವಿಡಿಯೋ, ಪೋಟೊಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸದಿದ್ದರೂ ನಿಯಮ ಮೀರಿ ಕರ್ತವ್ಯ ಲೋಪ ಎಸಗಿರುವ ಇವರಿಗೆ ಕ್ರಮಕೈಗೊಳ್ಳುವ ಜೊತೆಗೆ ಸೂಕ್ತ ದಂಡನೆ ನೀಡುವಂತೆ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.ಜಂಟಿ ನಿರ್ದೇಶಕರಿಂದಲೂ ವರದಿ ಸಲ್ಲಿಕೆ:ಮಾನ್ಯತೆ ನವೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ನಿರ್ದೇಶಕ ಸಹಾ ವಿಚಾರಣೆ ನಡೆಸಿ ಮಾನ್ಯತೆ ನವೀಕರಣ ವಿಚಾರದಲ್ಲಿ ಡಿಡಿಪಿಐ ಕರ್ತವ್ಯ ಲೋಪ, ಇಲಾಖಾ ನಿಯಮ ಉಲ್ಲಂಘನೆ ಕುರಿತು ಸರ್ಕಾರಕ್ಕೆ ಮತ್ತು ಇಲಾಖಾ ಆಯುಕ್ತರಿಗೆ ಈಗಾಗಲೇ 52 ಪುಟಗಳ ವರದಿ ಸಲ್ಲಿಸಿದ್ದಾರೆ ಎಂದು ಬಲ್ಲ ಮೂಲಗಳು ಖಚಿತ ಪಡಿಸಿವೆ.