ಸಾರಾಂಶ
ಮುಂಡಗೋಡ: ಕಳೆದ ಸಾಲಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ೪ನೇ ಸ್ಥಾನದಲ್ಲಿದ್ದ ಮುಂಡಗೋಡ ತಾಲೂಕು ಮುಂಬರುವ ವಾರ್ಷಿಕ ವಾರ್ಷಿಕ ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ರಷ್ಟು ಫಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಬೇಕು ಎಂದು ಶಿರಸಿ ಶೈಕ್ಷಣಿಕ ಜಿಲ್ಲೆ ಉಪನಿರ್ದೇಶಕ ಪಾರಿ ಬಸವರಾಜ ತಿಳಿಸಿದರು.ಗುರುವಾರ ಪಟ್ಟಣದ ನಗರಸಭಾ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂಡಗೋಡ ಹಾಗೂ ವಿಜೇತ ಶಿಕ್ಷಣ ಸಮಿತಿ ಧಾರವಾಡ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಹಾಗೂ ಪ್ರತಿಭಾನ್ವೇಷಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮೇಲಧಿಕಾರಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಶಿಕ್ಷಕರು ಇದರ ತೀವ್ರತೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಮತ್ತು ವಿದ್ಯಾರ್ಥಿಗಳು ಶಿಕ್ಷಕರು ಪಾಠ ಮಾಡಿದ್ದನ್ನು ಪ್ರತಿದಿನ ಓದಿ ಉತ್ತಮವಾದ ಫಲಿತಾಂಶ ನೀಡಬೇಕು ಎಂದರು. ಧಾರವಾಡ ವಿಜೇತ ಶಿಕ್ಷಣ ಸಂಸ್ಥೆ ನಿರ್ದೇಶಕ ರಮೇಶ್ ಪರಿಟ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರು ಮಾಡಿದ ಪಾಠಗಳನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಕಾರ್ಯಾಗಾರ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಉಪಯೋಗ ಪಡೆಯಿರಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ್ ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯಾಗಾರದ ಸದುಪಯೋಗ ಪಡೆದು ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಲ್ಲಿ ಎಲ್ಲ ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.ಸುರೇಶ್ ಕುಲಕರ್ಣಿ ಅವರು, ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದರು.ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾದ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ರಮೇಶ ಅಂಬಿಗೇರ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಂಜುನಾಥ ಮರಿತಮ್ಮಣ್ಣವರ, ಡಾ. ಪ್ರಕಾಶ್ ಕಲಹಾಳ ಹಾಗೂ ರಾಕೇಶ್ ಹಿರೇಮಠ, ತಾಲೂಕಿನ ವಿವಿಧ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಇದ್ದರು. ನಾಗರಾಜ ನಾಯ್ಕ ಸ್ವಾಗತಿಸಿದರು. ಎಸ್.ಡಿ. ಮುಡೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.