ಸಾರಾಂಶ
ಯಲ್ಲಾಪುರ: ಕಳೆದ ಒಂದು ವಾರದಿಂದ ಶಿರಸಿ- ಯಲ್ಲಾಪುರ ರಸ್ತೆ ಮಾರ್ಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೇರೆ ಊರಿನ ನಾಯಿಗಳನ್ನು ನಿರಂತರವಾಗಿ ಇಲ್ಲಿ ತಂದು ಬಿಡಲಾಗುತ್ತಿದ್ದು, ಅಲ್ಲಲ್ಲಿ ಗುಂಪು ಗುಂಪಾಗಿ ನಾಯಿಗಳು ಸಾವಿಗೀಡಾಗುತ್ತಿವೆ. ಒಂದೇ ಕಡೆ ೩೦ಕ್ಕೂ ಹೆಚ್ಚು ನಾಯಿಗಳ ಶವ ಬಿದ್ದಿರುವುದರಿಂದ ವಿಷಪ್ರಾಶನದಿಂದ ನಾಯಿಗಳನ್ನು ಕೊಲ್ಲುತ್ತಿರುವ ಅನುಮಾನ ವ್ಯಕ್ತವಾಗಿದೆ.ಕಳೆದ ಶನಿವಾರ ಒಂದಷ್ಟು ನಾಯಿಗಳು ಮಂಚಿಕೇರಿ ಬಳಿಯ ತೂಕದಬೈಲ್ ಬಳಿ ಕಾಣಿಸಿಕೊಂಡಿದ್ದವು. ಅದೇ ಪ್ರದೇಶದಲ್ಲಿ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ೩೦ಕ್ಕೂ ಅಧಿಕ ನಾಯಿಗಳ ಶವ ಬಿದ್ದಿದ್ದು, ಇದೀಗ ದುರ್ವಾಸನೆ ಉಂಟಾಗಿದೆ. ಇನ್ನು ರಸ್ತೆಯ ತುಂಬೆಲ್ಲ ನಾಯಿಗಳ ಓಡಾಟ ಕಾಣಿಸುತ್ತಿದೆ. ರೋಗಗ್ರಸ್ತ ನಾಯಿಗಳು ಇಲ್ಲಿ ಹೆಚ್ಚಿದ್ದು, ಬೈಕ್ ಸವಾರರ ಮೇಲೆ ಆಕ್ರಮಣ ನಡೆಸಿದ ದೂರುಗಳಿವೆ. ಕೆಲ ನಾಯಿಗಳು ಜೊಲ್ಲು ಸುರಿಸುತ್ತಿದ್ದರೆ ಇನ್ನೂ ಕೆಲವು ನಾಯಿಗಳ ದೇಹ ಗಾಯ- ಕಜ್ಜಿಗಳಿಂದ ಕೂಡಿವೆ.ಸಾವಿಗೀಡಾದ ನಾಯಿಗಳ ಶವ ಇದೀಗ ಕೊಳೆಯುತ್ತಿದ್ದು, ಆ ಪರಿಸರ ಹಾಳಾಗಿದೆ. ಹೀಗಾಗಿ ಆ ಭಾಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇನ್ನು ವಿಷಪ್ರಾಶನದಿಂದ ಆ ನಾಯಿಗಳು ಸಾವಿಗೀಡಾಗಿದ್ದರೆ ಆ ನಾಯಿಗಳನ್ನು ಭಕ್ಷಿಸುವ ವನ್ಯಜೀವಿ- ಪಕ್ಷಿಗಳ ಆರೋಗ್ಯದ ಮೇಲೂ ದುಷ್ಪರಿಣಾಮವಾಗುವ ಸಾಧ್ಯತೆಗಳಿವೆ.
ಟ್ರಕ್ ಮೂಲಕ ನಾಯಿಗಳನ್ನು ತಂದು ಬಿಟ್ಟಿರುವ ಬಗ್ಗೆ ಜನ ಪಂಚಾಯಿತಿಗೆ ತಿಳಿಸಿದ್ದರು. ನಾಯಿ ತಂದುಬಿಟ್ಟವರು ಯಾರು ಎಂದು ಗೊತ್ತಾಗಿಲ್ಲ. ನಾಯಿ ಸಾವಿಗೀಡಾದ ಬಗ್ಗೆಯೂ ಮಾಹಿತಿ ಇರಲಿಲ್ಲ ಎಂದು ಕಂಪ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್ ಪ್ರತಿಕ್ರಿಯಿಸಿದರು.ಶಿರಸಿ ಬದಿಯಿಂದ ಕಲಘಟಗಿಯವರೆಗೂ ನಾಯಿಗಳು ಸಾವಿಗೀಡಾಗಿವೆ. ಗ್ರಾಪಂ ವ್ಯಾಪ್ತಿಯಲ್ಲಿ ಸಾವಿಗೀಡಾದ ನಾಯಿಗಳನ್ನು ದಫನ್ ಮಾಡಲು ಕ್ರಮ ಜರುಗಿಸುವೆ ಎಂದು ಪಿಡಿಒ ರವಿ ಪಟಗಾರ ಪ್ರತಿಕ್ರಿಯಿಸಿದರು.
ಈ ಪ್ರಕರಣದ ಕ್ರಮದ ಕುರಿತಂತೆ ಶೀಘ್ರದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದೆಂದು ಕಂಪ್ಲಿ ಗ್ರಾಪಂ ಸದಸ್ಯ ಗಣೇಶ ರೋಖಡೆ ಮಾಹಿತಿ ನೀಡಿದ್ದಾರೆ.ಕಂಪ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಭೋವಿವಡ್ಡರ್ ಅವರು ಶಿರಸಿ- ಯಲ್ಲಾಪುರ ರಸ್ತೆ ಮಾರ್ಗವಾಗಿ ಓಡಾಡಿ ಜೆಸಿಬಿ ಯಂತ್ರದ ಮೂಲಕ ಸಾವಿಗೀಡಾದ ಶ್ವಾನಗಳನ್ನು ಮಣ್ಣು ಮಾಡಿಸಿದರು. ಗ್ರಾಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಮುಖಂಡ ಪಕೀರಪ್ಪ ಬೋವಿವಡ್ಡರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಅಗ್ನಿ ಅವಘಡ ತಡೆ ಪ್ರಾತ್ಯಕ್ಷತೆ
ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಡಿಸಿ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಅಗ್ನಿ ಅವಘಡಗಳನ್ನು ಎದುರಿಸುವ ಕುರಿತು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಗುರುವಾರ ನಡೆಯಿತು.ಉಪನ್ಯಾಸ ಮತ್ತು ಪ್ರಾತ್ಯಕ್ಷತೆಯನ್ನು ಅಗ್ನಿಶಾಮಕ ಠಾಣಾಧಿಕಾರಿ ಶಂಕರ ಅಂಗಡಿ ನೇತೃತ್ವದ ತಂಡದಿಂದ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಉಪವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.