ಸಾರಾಂಶ
ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿಶಾಲೆಯ ಮೂವರು ವಿದ್ಯಾರ್ಥಿನಿಯರ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿವೆ
ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿಶಾಲೆಯ ಮೂವರು ವಿದ್ಯಾರ್ಥಿನಿಯರ ಮೃತದೇಹ ಬುಧವಾರ ಮಧ್ಯಾಹ್ನ ಪತ್ತೆಯಾಗಿವೆ.
ಮಂಗಳವಾರ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಮುಳಬಾಗಿಲಿನ ಮೊರಾರ್ಜಿ ದೇಸಾಯಿ ವಸತಿಶಾಲೆಯ ವಿದ್ಯಾರ್ಥಿನಿಯರಲ್ಲಿ ೭ ವಿದ್ಯಾರ್ಥಿನಿಯರು ಸಮುದ್ರದಂಚಿನಲ್ಲಿ ಆಟವಾಡುತ್ತಿರುವಾಗ ಅಬ್ಬರದ ಅಲೆಯೊಂದು ಬಂದು ಕೊಚ್ಚಿಕೊಂಡು ಹೋಗಿತ್ತು. ಇವರಲ್ಲಿ ನಾಲ್ವರನ್ನು ಸ್ಥಳೀಯ ಮೀನುಗಾರರು, ಲೈಫ್ ಗಾರ್ಡ್‌ಗಳು ಸೇರಿ ತಕ್ಷಣ ಮೇಲಕ್ಕೆ ತಂದು ಆರ್‌ಎನ್ಎಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅವರಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮೂವರು ಚೇತರಿಸಿಕೊಂಡಿದ್ದರು.ಆದರೆ, ಅವರೊಂದಿಗೆ ಕೊಚ್ಚಿ ಹೋಗಿದ್ದ ಇನ್ನೂ ಮೂವರ ಸುಳಿವು ಬುಧವಾರ ಬೆಳಗ್ಗೆಯವರೆಗೂ ದೊರೆತಿಲ್ಲವಾಗಿತ್ತು. ಮಂಗಳವಾರ ಸಂಜೆಯಿಂದಲೇ ಸ್ಥಳೀಯ ಪೊಲೀಸರು, ಅಗ್ನಿಶಾಮದ ದಳ ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ಕಣ್ಮರೆಯಾದ ಮೂವರು ವಿದ್ಯಾರ್ಥಿನಿಯರಿಗಾಗಿ ಹುಡುಕಾಟ ನಡೆಸಿದ್ದರು.
ಬುಧವಾರ ಮಧ್ಯಾಹ್ನ ವಿದ್ಯಾರ್ಥಿನಿಯರಾದ ದೀಕ್ಷಾ(೧೫), ಲಾವಣ್ಯ(೧೫) ಹಾಗೂ ವಂದನಾ ಎಂ.(೧೫) ಇವರ ಮೃತದೇಹ ಸಮುದ್ರದಲ್ಲಿ ದೊರೆಯುವ ಮೂಲಕ ನಾಲ್ವರು ವಿದ್ಯಾರ್ಥಿನಿಯರು ಮುರುಡೇಶ್ವರ ಸಮುದ್ರದಲ್ಲಿ ಮೃತಪಟ್ಟಂತಾಗಿದೆ.ವಿದ್ಯಾರ್ಥಿನಿಯರು ನೀರಿನಲ್ಲಿ ಕೊಚ್ಚಿಹೋಗಿರುವ ಸುದ್ದಿ ತಿಳಿದು ಮಂಗಳವಾರ ರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಭೇಟಿ ನೀಡಿ ಕಣ್ಮರೆಯಾದ ವಿದ್ಯಾರ್ಥಿನಿಯರ ಪತ್ತೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದರು.
ಅದರಂತೆ ಆಸ್ಪತ್ರೆಗೂ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯರನ್ನು ಮಾತನಾಡಿಸಿ ಧೈರ್ಯ ತುಂಬಿದ್ದರು. ಉಳಿದ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆಯೊಂದಿಗೆ ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಬುಧವಾರ ಅವರನ್ನು ಕೋಲಾರಕ್ಕೆ ಕಳುಹಿಸುವ ತನಕದ ವ್ಯವಸ್ಥೆಯನ್ನೂ ನೋಡಿಕೊಂಡಿದ್ದರು.