ಸಾರಾಂಶ
ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿ ಹಳಿ ದಾಟುವಾಗ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ.
ಪುತ್ತೂರು: ಸೆಂಟ್ರಿಂಗ್ ಕಾರ್ಮಿಕರೋರ್ವರ ಮೃತದೇಹ ಪುತ್ತೂರಿನ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.
ರೈಲ್ವೆ ಹಳಿ ದಾಟುವ ವೇಳೆಯಲ್ಲಿ ರೈಲು ಡಿಕ್ಕಿಯಾಗಿ ಮೃತ ಪಟ್ಟಿರುವುದಾಗಿ ಶಂಕಿಸಲಾಗಿದೆ. ಪೆರ್ಲ ಉಕ್ಕಿನಡ್ಕ ಸಮೀಪದ ಸರ್ಪಂಗಳ ನಿವಾಸಿ ತಿಮ್ಮ ನಾಯ್ಕ ಎಂಬವರ ಪುತ್ರ ಚನಿಯಪ್ಪ ಯಾನೆ ರಾಧಾಕೃಷ್ಣ ನಾಯ್ಕ (46) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.ಸೆಂಟ್ರಿಂಗ್ ಕಾರ್ಮಿಕರಾದ ಇವರು ಪುತ್ತೂರು ಸಮೀಪದ ಕಬಕ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದರು. ಬುಧವಾರ ಬೆಳಗ್ಗೆ ತನ್ನ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಕಬಕ ಸ್ಟೇಶನ್ ವ್ಯಾಪ್ತಿಯ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿ ಹಳಿ ದಾಟುವಾಗ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾಲು ತುಂಡಾಗಿದ್ದು ರಾತ್ರಿ ವೇಳೆ ಯಾರ ಗಮನಕ್ಕೂ ಬಾರದೆ ಅತೀವ ರಕ್ತಸ್ರಾವದಿಂದ ವ್ಯಕ್ತಿ ಮೃತಪಟ್ಟಿರಬೇಕೆಂದು ಪೋಲಿಸರು ತಿಳಿಸಿದ್ದಾರೆ.
ಮೃತರು ತಾಯಿ ರಾಧಾವತಿ, ಪತ್ನಿ ಸುಮತಿ, ಮಕ್ಕಳಾದ ಸಪ್ತಮಿ, ಸಾತ್ವಿಕ್ ಸಹೋದರರಾದ ರಾಜ್ ಕುಮಾರ್, ಯೋಗಿಶ್ (ದುಬೈ ಉದ್ಯೋಗಿ), ಎಂಬಿವರನ್ನಗಲಿದ್ದಾರೆ. ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.--------------ಶಾಲಾ ಮಕ್ಕಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ: ವಿದ್ಯಾರ್ಥಿನಿ ಸಾವು
ಉಳ್ಳಾಲ: ಶಾಲಾ ಮಕ್ಕಳನ್ನು ಕರೆದೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಳ್ಮ ಗ್ರಾಮದ ಕಲ್ಲಪಾದೆ ಎಂಬಲ್ಲಿ ಗುರುವಾರ ಸಂಭವಿಸಿದೆ.ಬಡಕಬೈಲು ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11) ಮೃತ ವಿದ್ಯಾರ್ಥಿನಿ.ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ರಿಕ್ಷಾ ಕಲ್ಲಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಆಯಿಷಾ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ. ರಿಕ್ಷಾದಲ್ಲಿದ್ದ ಇತರೆ ನಾಲ್ವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿನಿ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಜೆ ಸಾರಲಾಗಿತ್ತು.