ಕೊಡಗು, ದಕ್ಷಿಣ ಕನ್ನಡ ಗಡಿ ಭಾಗವಾದ ಪೆರಾಜೆ ಪಾನತ್ತಿಲದ ರಸ್ತೆ ಬದಿಯಲ್ಲಿ ಕಡವೆಯ ಮೃತದೇಹ ಪತ್ತೆಯಾಗಿದೆ

ನಾಪೋಕ್ಲು: ಕೊಡಗು ದಕ್ಷಿಣ ಕನ್ನಡ ಗಡಿ ಭಾಗವಾದ ಪೆರಾಜೆ ಪಾನತ್ತಿಲದ ರಸ್ತೆ ಬದಿಯಲ್ಲಿ ಕಡವೆಯ ಮೃತದೇಹವೊಂದು ಪತ್ತೆಯಾಗಿದೆ.

ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಯಮಲೆ ಪಾನತ್ತಿಲದ ಎಂಬಲ್ಲಿ ಗುರುವಾರ ರಾತ್ರಿ ಬೇಟೆಗಾರರು ಕಡವೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅದು ರಸ್ತೆ ಬದಿ ಬಂದು ಬಿದ್ದು ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.ಈ ವ್ಯಾಪ್ತಿಯಲ್ಲಿ ಬೇಟೆಗಾರರು ನಿರಂತರ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದು ಅರಣ್ಯ ಇಲಾಖೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ಸಂಪಾಜೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ಕಡವೆಯನ್ನು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ರಸ್ತೆಯ ಬದಿಯಲ್ಲಿ ಕಡವೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.