ಗದಗ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಕರುವಿನ ಶಿರಚ್ಛೇದ ಮಾಡಿದ ದೇಹವನ್ನು ಬಿಸಾಡಿ ಹೋಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಈ ಕೃತ್ಯವು ಸ್ಥಳೀಯರಲ್ಲಿ ತೀವ್ರ ಗೊಂದಲ ಮೂಡಿಸಿದ್ದು, ಚಿರತೆ ದಾಳಿಯಿಂದ ಕರು ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಎರಡು ಬಗೆಯ ಚರ್ಚೆಗೆ ಕಾರಣವಾಗಿದೆ. ಅನಾಮಿಕ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕರುವಿನ ತಲೆ ಕತ್ತರಿಸಿ ಗೋಹತ್ಯೆ ಮಾಡಿ, ದೇಹವನ್ನು ಇಲ್ಲಿ ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಕರುವಿನ ತಲೆಯನ್ನು ಚೀಲದಲ್ಲಿ ತುಂಬಿಕೊಂಡು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

​ಚಿರತೆಯ ಕೃತ್ಯ?: ಮತ್ತೊಂದು ವಾದದ ಪ್ರಕಾರ, ಇತ್ತೀಚೆಗೆ ಅವಳಿ ನಗರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆಯೇ ಈ ಕೃತ್ಯ ಎಸಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಚಿರತೆಯು ಕೊಂದ ನಂತರ ದೇಹವನ್ನು ಎಳೆದು ತಂದಿರಬಹುದು ಎಂದು ಊಹಿಸಲಾಗಿದೆ. ​ಈ ಎರಡೂ ಸಾಧ್ಯತೆಗಳಿಂದಾಗಿ ಅವಳಿ ನಗರದ ಜನರಲ್ಲಿ ತೀವ್ರ ಗೊಂದಲ ಉಂಟಾಗಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಒತ್ತಾಯ: ​ಕರುವಿನ ದೇಹ ಪತ್ತೆಯಾದ ಕೂಡಲೇ ಸುದ್ದಿ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದು ಗೋಹತ್ಯೆ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ​ಗೋವು ಹತ್ಯೆ ಮಾಡಿದ ದುಷ್ಟರಿಗೆ ತಕ್ಷಣವೇ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.


​ಘಟನೆಯು ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ಹಿಂದೆ ಇರುವವರನ್ನು ಪತ್ತೆ ಹಚ್ಚಲು ಮತ್ತು ಇದು ನಿಜಕ್ಕೂ ಚಿರತೆಯ ಕೃತ್ಯವೇ ಅಥವಾ ದುಷ್ಕರ್ಮಿಗಳ ಕೃತ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಗ್ರ ತನಿಖೆಯಾಗಬೇಕಿದೆ.