ಸಾರಾಂಶ
ಹಾರಂಗಿ ಹಿನ್ನೀರಿನಲ್ಲಿ ಭಾನುವಾರ ಸಂಜೆ ಮುಳುಗಿದ್ದ ಮೈಸೂರು ಮೂಲದ ಪ್ರವಾಸಿಗನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಹಾದ್ರೆ ಹೆರೂರು ವ್ಯಾಪ್ತಿಯ ಹಾರಂಗಿ ಹಿನ್ನೀರಿನಲ್ಲಿ ಭಾನುವಾರ ಸಂಜೆ ಮುಳುಗಿದ್ದ ಮೈಸೂರು ಮೂಲದ ಪ್ರವಾಸಿಗ ಶಶಿ ಎಂಬಾತನ ಮೃತದೇಹವು ಸೋಮವಾರ ಬೆಳಗ್ಗೆ 8 ಗಂಟೆಯ ಸುಮಾರಿಗೆ ಪತ್ತೆಯಾಗಿದೆ.ಮೈಸೂರಿನಿಂದ 10 ಜನರ ತಂಡವೊಂದು ಶನಿವಾರ ಕೊಡಗು ಪ್ರವಾಸಿ ತಾಣವನ್ನು ವೀಕ್ಷಿಸಲು ಆಗಮಿಸಿದ್ದರು. ಹಾಗೆಯೇ ಭಾನುವಾರ ಸಂಜೆ ಮೈಸೂರಿಗೆ ವಾಪಸಾಗುವ ಮುನ್ನ ಸುಂಟಿಕೊಪ್ಪ ಸಮೀಪದ ಹೆರೂರು ಹಾರಂಗಿ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಈಜಲು ತೆರಳಿದ ಮೈಸೂರಿನ ಮೇಟ್ಗಳ್ಳಿ ನಿವಾಸಿ ಶಶಿ ಅವರು ಮುಳುಗಿ ಸಾವನ್ನಪ್ಪಿದ್ದರು.ಭಾನುವಾರ ರಾತ್ರಿಯವರೆಗೂ ಸುಂಟಿಕೊಪ್ಪ ಪೊಲೀಸ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.ಅದರಂತೆ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಕಾರ್ಯಾಚರಣೆಗೆ ಇಳಿದ ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ಸಿಪಿಐ ರಾಜೇಶ್ ಕೋಟ್ಯಾನ್, ಮಾರ್ಗದರ್ಶನದಲ್ಲಿ ಸುಂಟಿಕೊಪ್ಪ ಅಪರಾಧ ಪತ್ತೆದಳದ ಪಿಎಸ್ ಐ ಸ್ವಾಮಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಸತೀಸ್, ಜಗದೀಶ್, ನಿಶಾಂತ್, ಸತೀಶ್ ಇಳೆಗೆರೆ ಅವರು ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರೀಸುದಾರರಿಗೆ ಒಪ್ಪಿಸಲಾಯಿತು.