ಎಂಎಲ್ಸಿ ಐವನ್‌ ಡಿಸೋಜಾ ವಿರುದ್ಧ ಕೇಸು ದಾಖಲಿಗೆ ಮತ್ತೆ ಗಡುವು

| Published : Aug 22 2024, 12:45 AM IST

ಎಂಎಲ್ಸಿ ಐವನ್‌ ಡಿಸೋಜಾ ವಿರುದ್ಧ ಕೇಸು ದಾಖಲಿಗೆ ಮತ್ತೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಮೋರ್ಚಾ ಮುತ್ತಿಗೆ ಕರೆ ಹಿನ್ನೆಲೆಯಲ್ಲಿ ಬರ್ಕೆ ಠಾಣೆಯ ಸುತ್ತಮುತ್ತ ಬಿಗು ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕಾಂಗ್ರೆಸ್‌ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಠಾಣಾ ಮುತ್ತಿಗೆ ಬದಲು ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಬುಧವಾರ ಮತ್ತೆ ಗಡುವು ವಿಧಿಸಿದೆ. ಮುಂದಿನ 24 ಗಂಟೆಯೊಳಗೆ ಎಫ್‌ಐಆರ್‌ ದಾಖಲಿಸದೇ ಇದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ಪೊಲೀಸ್‌ ಇಲಾಖೆಗೆ ಎಚ್ಚರಿಕೆ ನೀಡಿದೆ.

ಪ್ರಚೋದನಕಾರಿ ಭಾಷಣ ವಿರುದ್ಧ ಐವನ್‌ ಡಿಸೋಜಾ ಮೇಲೆ ಕೇಸು ದಾಖಲಿಸುವಂತೆ ಆಗ್ರಹಿಸಿ ಯುವ ಮೋರ್ಚಾ ವತಿಯಿಂದ ಬರ್ಕೆ ಪೊಲೀಸರಿಗೆ ಮಂಗಳವಾರ ದೂರು ನೀಡಲಾಗಿತ್ತು. ಅಲ್ಲದೆ 48 ಗಂಟೆಗಳೊಳಗೆ ದೂರು ದಾಖಲಿಸದಿದ್ದರೆ, ಠಾಣೆಗೆ ಮುತ್ತಿಗೆ ಹಾಕುವುದಾಗಿ ಯುವ ಮೋರ್ಚಾ ಮುಖಂಡರು ಹೇಳಿದ್ದರು. ಮುತ್ತಿಗೆ ದಿಢೀರ್‌ ಕೈಬಿಟ್ಟರು: ಬುಧವಾರ ಮಧ್ಯಾಹ್ನ ವರೆಗೂ ಬರ್ಕೆ ಠಾಣೆ ಪೊಲೀಸರು ಐವನ್‌ ಡಿಸೋಜಾ ವಿರುದ್ಧ ಕೇಸು ದಾಖಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಯುವ ಮೋರ್ಚಾ ಸಂಜೆ ಠಾಣೆಗೆ ಮುತ್ತಿಗೆ ನಡೆಸುವುದಾಗಿ ತಿಳಿಸಿತ್ತು. ಅದರಂತೆ ನಿಗದಿತ ಅರ್ಧ ಗಂಟೆ ಬಳಿಕ ಯುವ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಬರ್ಕೆ ಠಾಣೆಗೆ ಆಗಮಿಸಿದರು. ಆದರೆ ಠಾಣೆಗೆ ಮುತ್ತಿಗೆ ಬದಲು ಮತ್ತೊಮ್ಮೆ ಮಾತುಕತೆ ನಡೆಸಲು ಆಗಮಿಸಿರುವುದಾಗಿ ತಿಳಿಸಿದರು. ಬಳಿಕ ಠಾಣೆಯೊಳಗೆ ತೆರಳಿ ಎಸಿಪಿ ಪ್ರತಾಪ್‌ ಸಿಂಗ್‌ ಥೋರಟ್‌ ಜೊತೆ ಮಾತುಕತೆ ನಡೆಸಿದರು. ಇಂದು ಕೊನೆ ಗಡುವು: ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ ಮಾತನಾಡಿ, ಯುವ ಮೋರ್ಚಾದಿಂದ ಐವನ್‌ ಡಿಸೋಜಾ ವಿರುದ್ಧ ದೂರು ನೀಡಿ 48 ಗಂಟೆ ಕಳೆದಿದೆ. ಠಾಣೆಯಿಂದ ಹಿಂಬರಹ ನೀಡಿದ್ದು ಬಿಟ್ಟರೆ ಎಫ್‌ಐಆರ್‌ ದಾಖಲಾಗಿಲ್ಲ. ಐವನ್‌ ಡಿಸೋಜಾ ಅವರು ಪ್ರಚೋದನಾಕಾರಿ ಮಾತನಾಡಿದ ಕಾರಣ ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಬಸ್‌ಗೆ ಕಲ್ಲು ತೂರಾಟದಂತಹ ಘಟನೆಗಳು ನಡೆದಿವೆ. ಹಾಗಾಗಿ ಕೂಡಲೇ ಐವನ್‌ ಡಿಸೋಜಾ ಮೇಲೆ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಪ್ರತಾಪ್‌ಸಿಂಗ್‌ ಥೋರಟ್‌, ಕೇಸು ದಾಖಲಿಸಲು ಕಾನೂನು ತಜ್ಞರ ಸಲಹೆ ಪಡೆಯಬೇಕು ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಅರುಣ್‌ ಶೇಟ್‌ ಮಾತನಾಡಿ, ಪೊಲೀಸರ ಎದುರಿನಲ್ಲೇ ಐವನ್‌ ಡಿಸೋಜಾ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಾಕ್ಷ್ಯ ಕೂಡ ಪೊಲೀಸರಲ್ಲಿ ಇದೆ. ಇಲ್ಲಿನ ಶಾಸಕರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸುತ್ತಾರೆ. ಆದರೆ ಸಾಕ್ಷಿ ಇದ್ದರೂ ಐವನ್‌ ಡಿಸೋಜಾ ವಿರುದ್ಧ ಕೇಸು ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ. ಹೀಗಾದರೆ ಜನತೆ ಪೊಲೀಸರ ಮೇಲಿನ ವಿಶ್ವಾಸ ಕಳಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದರು.

ಇದಕ್ಕೆ ಸಮಜಾಯಿಸಿ ನೀಡಿದ ಎಸಿಪಿ ಪ್ರತಾಪ್‌ ಸಿಂಗ್‌ ಥೋರಟ್‌, ಇದರಲ್ಲಿ ಯಾರ ಒತ್ತಡವೂ ಇಲ್ಲ, ಎಲ್ಲವೂ ಕಾನೂನು ರೀತ್ಯಾ ನಡೆಯುತ್ತದೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಹಾಗಾದರೆ ಕೇಸು ದಾಖಲಿಸಲು ಮತ್ತೆ 24 ಗಂಟೆ ಗಡುವು ವಿಧಿಸುವುದಾಗಿ ಯುವ ಮೋರ್ಚಾ ಮುಖಂಡರು ಎಸಿಪಿ ಅವರಲ್ಲಿ ತಿಳಿಸಿ ಠಾಣೆಯಿಂದ ನಿರ್ಗಮಿಸಿದರು.

34ಕ್ಕೂ ಅಧಿಕ ಕೇಸು ದಾಖಲು: ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಐವನ್ ಡಿಸೋಜಾ ಮೇಲೆ ಬರ್ಕೆ ಠಾಣೆಯಲ್ಲಿ ನಾನು ಮಾತ್ರವಲ್ಲ ಶಹನವಾಜ್‌, ಅಖಿಲೇಶ್‌ ಶೆಟ್ಟಿ, ಅಕ್ಷಿತ್‌ ಶೆಟ್ಟಿ ಸೇರಿ ನಾಲ್ಕು ಮಂದಿ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಠಾಣೆ ಸೇರಿದಂತೆ ಸುಮಾರು 34ಕ್ಕೂ ಅಧಿಕ ಕೇಸುಗಳು ಯುವ ಮೋರ್ಚಾದಿಂದ ದಾಖಲಾಗಿದೆ. ಆ.22ರ ಸಂಜೆಯೊಳಗೆ ಬರ್ಕೆ ಠಾಣೆಯಲ್ಲಿ ಐವನ್‌ ಡಿಸೋಜಾ ಮೇಲೆ ಕೇಸು ದಾಖಲಿಸದಿದ್ದರೆ ಜಿಲ್ಲೆಯಾದ್ಯಂತ ಬೃಹತ್‌ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಠಾಣೆಯಲ್ಲಿ ಮಾತುಕತೆ ವೇಳೆ ನಿಯೋಗದಲ್ಲಿ ಯುವ ಮೋರ್ಚಾ ಮುಖಂಡರಾದ ನಿಶಾಂತ್‌ ಪೂಜಾರಿ, ಸಾಕ್ಷಾತ್‌ ಶೆಟ್ಟಿ, ರಕ್ಷಿತ್‌ ಕೊಟ್ಟಾರಿ, ಅವಿನಾಶ್‌ ಸುವರ್ಣ, ಜೋಯಲ್‌ ಮೆಂಡೋನ್ಸಾ ಮತ್ತಿತರರಿದ್ದರು.

ಯುವ ಮೋರ್ಚಾ ಮುತ್ತಿಗೆ ಕರೆ ಹಿನ್ನೆಲೆಯಲ್ಲಿ ಬರ್ಕೆ ಠಾಣೆಯ ಸುತ್ತಮುತ್ತ ಬಿಗು ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.