ನಗರೋತ್ಥಾನ ಕಾಮಗಾರಿ ಪೂರ್ಣಗೊಳಿಸಲು ಗಡುವು

| Published : Jun 25 2024, 12:36 AM IST

ಸಾರಾಂಶ

ನಗರದ ಅಭಿವೃದ್ಧಿಗೆ ಮೊದಲ ಅದ್ಯತೆ ನೀಡಬೇಕು ಇದಕ್ಕೆ ಗುತ್ತಿಗೆದಾರರು ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಪ್ರತಿಯೊಬ್ಬರ ಅಭಿಪ್ರಾಯ ಪಡೆಯಬೇಕು. ಕಾಮಗಾರಿಗೆ ಹಣದ ಕೊರತೆ ಇಲ್ಲ

ಕನ್ನಡಪ್ರಭ ವಾರ್ತೆ ಕೋಲಾರನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯ ಮೂಲಕ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಗುತ್ತಿಗೆದಾರನಿಗೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಎಚ್ಚರಿಕೆ ನೀಡಿದರು.ನಗರಸಭೆಯ ಸಭಾಂಗಣದಲ್ಲಿ ನಗರಸಭೆಗೆ ಸಂಬಂಧಿಸಿದ ಕುಂದುಕೊರತೆಗಳ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಚೇರಿಗೆ ಸೀಮಿತರಾಗಬೇಡಿ

ಅಭಿವೃದ್ಧಿಗೆ ಹಣದ ಕೊರತೆಯಿಲ್ಲ, ಕಾಮಗಾರಿಗಳು ಆಗದೆ ಸಮಸ್ಯೆ ತಂದಾಗ ಅಭಿವೃದ್ಧಿ ಹೇಗೆ ಸಾಧ್ಯ. ನಗರಸಭೆ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಪ್ರತಿನಿತ್ಯ ಕಾಮಗಾರಿಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಬೇಕು, ಕೇವಲ ಕಚೇರಿಗೆ ಮಾತ್ರ ಸೀಮಿತವಾಗಬಾರದು ಗುತ್ತಿಗೆದಾರನಿಗೆ ವಹಿಸಿದ್ದೇವೆ ಅವರೇ ನೋಡಿಕೊಳ್ಳತ್ತಾರೆ ಅಂತ ಕೂತರೆ ಜನರಿಂದ ಮತ ಹಾಕಿಸಿಕೊಂಡ ತಪ್ಪಿಗೆ ಜನಪ್ರತಿನಿಧಿಗಳನ್ನು ಬೈದುಕೊಂಡು ಹೋಗತ್ತಾರೆ. ಜನರಿಗೋಸ್ಕರ ನಾವು ಇದ್ದೇವೆ ಎಂಬುದನ್ನು ಅರ್ಥಮಾಡಿಕೊಂಡು ಹೋಗಿ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಕೆಲಸ ಅರ್ಧಕ್ಕೇ ನಿಲ್ಲಿಸಬೇಡಿ

ನಗರದ ಅಭಿವೃದ್ಧಿಗೆ ಮೊದಲ ಅದ್ಯತೆ ನೀಡಬೇಕು ಇದಕ್ಕೆ ಗುತ್ತಿಗೆದಾರರು ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಪ್ರತಿಯೊಬ್ಬರ ಅಭಿಪ್ರಾಯ ಪಡೆಯಬೇಕು. ನಗರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರು ಒಂದು ಕಾಮಗಾರಿ ಪೂರ್ಣಗೊಂಡ ನಂತರ ಮತ್ತೊಂದು ಕಾಮಗಾರಿ ಪ್ರಾರಂಭ ಮಾಡಬೇಕು. ಅದು ಬಿಟ್ಟು ಪ್ರಾರಂಭ ಮಾಡಿ ಮಧ್ಯದಲ್ಲೇ ಬಿಟ್ಟರೆ ಸುಮ್ಮನೆ ಬಿಡಲ್ಲ. ಎಲ್ಲಾ ಕಾಮಗಾರಿಗಳನ್ನು ಮಾಡಲು ಹೋಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಡಿ. ಅನುದಾನಕ್ಕೆ ಕೊರತೆಯಿಲ್ಲ, ಆದರೆ ಕಾಮಗಾರಿಗಳು ಪೂರ್ಣಗೊಳ್ಳದೇ ಅನುದಾನ ಕೊಡಲು ಸಾಧ್ಯವಿಲ್ಲ ಎಂದರು.ಅಧಿಕಾರಿಗಳಿಗೆ ಇಂತಿಷ್ಟು ಅಂತ ಕೆಲಸದ ಸಮಯವಿದೆ, ಆದರೆ ಜನಪ್ರತಿನಿಧಿಗಳಿಗೆ ದಿನದ ೨೪ ಗಂಟೆಯೂ ಕೂಡ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ, ರಾತ್ರಿ ಮಲಗಿದ್ದರೂ ಜನ ಬಿಡಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಇಲ್ಲದೇ ಹೋದರೆ ವರ್ಗಾವಣೆ ಮಾಡಿಕೊಂಡು ಹೋಗಿ. ನಿಮ್ಮ ಜಾಗಕ್ಕೆ ಕೆಲಸ ಮಾಡೋರನ್ನು ಕರೆಸಿಕೊಳ್ಳುವುದು ನಮಗೆ ಗೊತ್ತಿದೆ ಎಂದು ಎಚ್ಚರಿಸಿದರು.

ಜವಾಬ್ದಾರಿಯಿಂದ ಕೆಲಸ ಮಾಡಿ

ನಗರದಾದ್ಯಂತ ಬೀದಿ ದ್ವೀಪಗಳಿಗೆ ಸಂಬಂಧಿಸಿದಂತೆ ಸರ್ವೇ ಮಾಡಿಸಿ ಎಷ್ಟು ಅವಶ್ಯಕತೆ ಇದೆ ಕೂಡಲೇ ಗಮನಕ್ಕೆ ತನ್ನಿ ಜೊತೆಗೆ ಪ್ರತಿ ತಿಂಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆಯೇ ಕೊನೆಯ ವಾರ ಸಭೆ ನಡೆಯಲಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.ನಗರಸಭೆ ಸದಸ್ಯ ಪ್ರಸಾದ್ ಬಾಬು ಮಾತನಾಡಿ, ಗುತ್ತಿಗೆದಾರನಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ವಿನಾಕಾರಣ ನಗರಸಭೆ ಸದಸ್ಯರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಪ್ರಶ್ನೆ ಮಾಡಿದರೆ ನಾವು ಲೋಕಲ್ ಅಂತಾರೆ, ಲೋಕಲ್ ಆದರೆ ರಾಜಕೀಯ ಮಾಡಲಿ. ಟೆಂಡರ್ ಯಾಕೆ ಪಡೆಯಬೇಕು. ಇವರನ್ನು ಮೊದಲು ಬ್ಲಾಕ್ ಲಿಸ್ಟ್‌ಗೆ ಹಾಕಲಿ. ಉಳಿದವರಿಗೂ ಇದು ಪಾಠವಾಗುತ್ತದೆ, ನಗರೋತ್ಥಾನ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ಒತ್ತಾಯಿಸಿದರು.ಕಾಮಗಾರಿ ಗುಣಮಟ್ಟ ಕಾಪಾಡಿ

ನಗರಸಭೆ ಸದಸ್ಯರಾದ ರಾಕೇಶ್, ಸೂರಿ, ಮುರಳಿಗೌಡ ಮಾತನಾಡಿ, ನಗರಸಭೆ ಅಧಿಕಾರಿಗಳಿಗೆ ನಾವು ಜನರಿಂದ ಆಯ್ಕೆಯಾದ ಸದಸ್ಯರು ಅಂತ ಪರಿಗಣಿಸುತ್ತಿಲ್ಲ. ಕನಿಷ್ಠ ಸಮಸ್ಯೆ ಹೇಳಿದಾಗ ಪರಿಹಾರಕ್ಕೆ ಸಹ ಮುಂದಾಗುತ್ತಿಲ್ಲ. ನಗರೋತ್ಥಾನ, ಯರಗೋಳು ಕಾಮಗಾರಿಗಳಿಗೆ ವೇಗ ನೀಡಬೇಕು, ಕಾಮಗಾರಿ ಗುಣಮಟ್ಟ ಕಾಪಾಡಬೇಕು, ಕ್ಯೂರಿಂಗ್ ಸರಿಯಾಗಿ ಆಗಬೇಕು, ಯುಜಿಡಿಯ ಅನಾವಶ್ಯಕವಾಗಿ ತೋಡಿದ ಗುಂಡಿಗಳನ್ನು ಕೂಡಲೇ ಮುಚ್ಚಬೇಕು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ, ಎಂಜಿನಿಯರ್ ಶ್ರೀನಿವಾಸ್ ಇದ್ದರು.