ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ರೇಷನ್ ಕಾರ್ಡ್ಗಳಿಗೆ ಇ-ಕೆವೈಸಿ (e-KYC) ಮಾಡಿಸಲು ಅ. 20 ಅಂತಿಮ ದಿನವಾಗಿ ನಿಗದಿಪಡಿಸಲಾಗಿದೆ. ಆದರೆ, ಅಗತ್ಯ ಸೌಲಭ್ಯಗಳ ಕೊರತೆ ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ಪರದಾಡುವಂತಾಗಿದೆ.
ಹುಬ್ಬಳ್ಳಿ:
ಪಡಿತರ ಚೀಟಿದಾರರ ಇ-ಕೆವೈಸಿ (e-KYC) ಗಡುವು ವಿಸ್ತರಣೆ ಹಾಗೂ ತಾಂತ್ರಿಕ ದೋಷ ಸರಿಪಡಿಸುವಂತೆ ತಾಲೂಕಿನ ಶರೆವಾಡ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ರೇಷನ್ ಕಾರ್ಡ್ಗಳಿಗೆ ಇ-ಕೆವೈಸಿ (e-KYC) ಮಾಡಿಸಲು ಅ. 20 ಅಂತಿಮ ದಿನವಾಗಿ ನಿಗದಿಪಡಿಸಲಾಗಿದೆ. ಆದರೆ, ಅಗತ್ಯ ಸೌಲಭ್ಯಗಳ ಕೊರತೆ ಮತ್ತು ತಾಂತ್ರಿಕ ತೊಂದರೆಗಳಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಜನರು ಅಕ್ಷರಶಃ ಪರದಾಡುವಂತಾಗಿದೆ. ನಿಗದಿತ ಅವಧಿಯೊಳಗೆ ಪ್ರಕ್ರಿಯೆ ಮುಗಿಯದೆ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದಿದ್ದಾರೆ.
ನಿರಂತರ ಸರ್ವರ್ ಡೌನ್:ಬೆಳಗ್ಗೆಯಿಂದ ರಾತ್ರಿ ವರೆಗೆ ನ್ಯಾಯಬೆಲೆ ಅಂಗಡಿ ಹಾಗೂ ಗ್ರಾಹಕ ಸೇವಾ ಕೇಂದ್ರಗಳ (ಬೆಂಗಳೂರು ಒನ್ / ಕರ್ನಾಟಕ ಒನ್) ಮುಂದೆ ಜನರು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಆದರೆ, ಸರ್ವರ್ ಸದಾಕಾಲ ಕೈಕೊಡುತ್ತಿರುವುದರಿಂದ ಗಂಟೆಗಳಾದರೂ ಒಪನ್ ಆಗದೆ, ದಿನವಿಡೀ ಕಾಯ್ದು ವಾಪಸ್ ಹೋಗುವಂತಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಜತೆಗೆ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.ಆಧಾರ್ ಅಪ್ಡೇಟ್ ಸಮಸ್ಯೆ:ಹಲವು ಫಲಾನುಭವಿಗಳ ಆಧಾರ್ ಕಾರ್ಡ್ನಲ್ಲಿ ಬಯೋಮೆಟ್ರಿಕ್ ಕೈಕೊಡುವುದು, ಮೊಬೈಲ್ ನಂಬರ್ ಲಿಂಕ್ ಆಗದಿರುವುದು ಅಥವಾ ವಿಳಾಸ ಹಾಗೂ ಹೆಸರುಗಳಲ್ಲಿ ವ್ಯತ್ಯಾಸವಿರುವುದು ತೊಂದರೆಗೆ ಕಾರಣವಾಗಿದೆ. ಆಧಾರ್ ಕೇಂದ್ರಗಳಿಗೆ ಅಲೆದಾಡಿದರೂ ಅಲ್ಲಿಯೂ ಕೂಡ ತೀವ್ರ ನೂಕುನುಗ್ಗಲು ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಆಧಾರ್ ಅಪ್ಡೇಟ್ ಮಾಡಿಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಅಶಕ್ತರ ಗೋಳು:ನಡೆದಾಡಲಾಗದ ಹಿರಿಯ ನಾಗರಿಕರು, ಅಶಕ್ತರು ಹಾಗೂ ವಿಕಲಚೇತನರು ಬಯೋಮೆಟ್ರಿಕ್ ನೀಡಲು ಬೆರಳುಗಳ ರೇಖೆಗಳು ಮಸುಕಾಗಿರುವ ಕಾರಣದಿಂದಾಗಿ ಹಾಗೂ ಕೇಂದ್ರಗಳಿಗೆ ಅಲೆದಾಡಲಾರದೆ ನರಕಯಾತನೆ ಅನುಭವಿಸುತ್ತಿದ್ದಾರೆ. ದೂರದ ಹಳ್ಳಿಗಳಿಂದ ಬರುವ ಜನರಿಗೆ ಬಸ್ ಖರ್ಚು ಹಾಗೂ ಅಲೆದಾಟದ ದಣಿವು ಮಾತ್ರ ಉಳಿಯುತ್ತಿದೆ.ಮಾಹಿತಿ ಕೊರತೆ ಮತ್ತು ಆತಂಕ:
ಗ್ರಾಮೀಣ ಭಾಗದ ಜನರಿಗೆ ಇ-ಕೆವೈಸಿ ಮಾಡುವ ಬಗ್ಗೆಯಾಗಲಿ ಅಥವಾ ಆಧಾರ್ ಅಪ್ಡೇಟ್ ಅಗತ್ಯತೆಯ ಬಗ್ಗೆಯಾಗಲಿ ಪೂರ್ಣ ಪ್ರಮಾಣದ ಅರಿವಿಲ್ಲ. ಕೇವಲ ಕೆಲವೇ ದಿನಗಳು ಬಾಕಿ ಇರುವುದರಿಂದ ತಮ್ಮ ರೇಷನ್ ಕಾರ್ಡ್ ರದ್ದಾಗಿ, ಸರ್ಕಾರದ ಉಚಿತ ಅಥವಾ ರಿಯಾಯಿತಿ ಧನದ ಅಕ್ಕಿ ಸಿಗುವುದಿಲ್ಲವೋ ಎಂಬ ತೀವ್ರ ಆತಂಕ ಹಾಗೂ ಭಯದಲ್ಲಿ ಜನರಿದ್ದಾರೆ.ಆದ್ದರಿಂದ, ಸಾರ್ವಜನಿಕರ ಈ ಎಲ್ಲ ಗಂಭೀರ ಸಮಸ್ಯೆಗಳನ್ನು ಹಾಗೂ ಕಷ್ಟ-ನಷ್ಟಗಳನ್ನು ಪರಿಗಣಿಸಿ, ಸರ್ಕಾರವು ಇ-ಕೆವೈಸಿ ಮಾಡಿಸಲು ನೀಡಿರುವ ಅಂತಿಮ ದಿನಾಂಕವನ್ನು ಕನಿಷ್ಠ ಒಂದು ಅಥವಾ ಎರಡು ತಿಂಗಳುಗಳ ಕಾಲ ವಿಸ್ತರಿಸಬೇಕು. ಇದರೊಂದಿಗೆ ಸರ್ವರ್ ವ್ಯವಸ್ಥೆಯನ್ನು ಸುಧಾರಿಸಬೇಕು ಹಾಗೂ ಹಳ್ಳಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಸುಲಭವಾಗಿ ಇ-ಕೆವೈಸಿ ಮಾಡಿಕೊಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಂಬಂಧಪಟ್ಟ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಜನರ ಆತಂಕವನ್ನು ದೂರ ಮಾಡಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.