ಸಾರಾಂಶ
ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿರುವ ಗಣೇಶ ಹಬ್ಬವೂ ಆಧುನಿಕ ದಿನಗಳಲ್ಲಿ ಕಾನೂನು ಕಟ್ಟಳೆಗಳ ಮಧ್ಯೆ ನಡೆಯುತ್ತಿದೆ. ಗಣೇಶ ಪ್ರತಿಷ್ಠಾಪನೆ ಮಂಡಳಿ ಇಲಾಖೆಯ ಸಹಕಾರದೊಂದಿಗೆ ಹಬ್ಬ ಆಚರಿಸುವ ಮೂಲಕ ಕೋಮುಗಲಭೆ ಆಸ್ಪದ ನೀಡಬಾರದು.
ಕುಷ್ಟಗಿ:
ಗಣೇಶ ಪ್ರತಿಷ್ಠಾಪನೆ ಮಂಡಳಿಗಳು ರಾತ್ರಿ 10 ಗಂಟೆ ಒಳಗೆ ಗಣೇಶ ವಿಸರ್ಜನೆ ಮಾಡಬೇಕೆಂದು ಸಿಪಿಐ ಯಶವಂತ ಬಿಸನಳ್ಳಿ ಹೇಳಿದರು.ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 110 ಡೆಸಿಬಲ್ ಸೌಂಡ್‌ಗಿಂತ ಹೆಚ್ಚು ಬಳಸದೆ ಮೆರವಣಿಗೆ ನಡೆಸಬೇಕು. ಈ ವೇಳೆ ಪಟಾಕಿ ಒಡೆಯುವಂತಿಲ್ಲ, ಚಿಕ್ಕ ಮಕ್ಕಳ ಬಳಸಿಕೊಳ್ಳಬಾರದೆಂದು ತಿಳಿಸಿದರು.
ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿರುವ ಗಣೇಶ ಹಬ್ಬವೂ ಆಧುನಿಕ ದಿನಗಳಲ್ಲಿ ಕಾನೂನು ಕಟ್ಟಳೆಗಳ ಮಧ್ಯೆ ನಡೆಯುತ್ತಿದೆ. ಗಣೇಶ ಪ್ರತಿಷ್ಠಾಪನೆ ಮಂಡಳಿ ಇಲಾಖೆಯ ಸಹಕಾರದೊಂದಿಗೆ ಹಬ್ಬ ಆಚರಿಸುವ ಮೂಲಕ ಕೋಮುಗಲಭೆ ಆಸ್ಪದ ನೀಡಬಾರದು ಎಂದರು.ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಪೋಸ್ಟ್ ಹಾಕಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಿಎಸೈ ಹನಮಂತಪ್ಪ ತಳವಾರ ಮಾತನಾಡಿ, ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ 132 ಕಡೆ ಗಣೇಶ ಪ್ರತಿಷ್ಠಾಪಿಸುತ್ತಿದ್ದು ಮಂಡಳಿ ದಿನದ 24 ತಾಸು ಕಾಯುವ ಜತೆಗೆ ಸ್ವಯಂ ಸೇವಕರ ಪಟ್ಟಿ ನೀಡಬೇಕು, ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಿ ಬೆಳಕಿನ ವ್ಯವಸ್ಥೆ ಮಾಡಬೇಕು. ಕೋಮು-ಗಲಭೆ ಸೃಷ್ಟಿಸುವ ಹಾಡುಗಳನ್ನು ಮೆರವಣಿಗೆಯಲ್ಲಿ ಬಳಸಬಾರದು ಎಂದು ತಿಳಿಸಿದರು.ಜೆಸ್ಕಾಂ ಅಧಿಕಾರಿ ಚಂದ್ರಕಾಂತ ಮಾತನಾಡಿ, ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸುವವರು ಕಡ್ಡಾಯವಾಗಿ ಜೆಸ್ಕಾಂ ಇಲಾಖೆ ವತಿಯಿಂದ ಅನುಮತಿ ಪಡೆದುಕೊಂಡು ಪರವಾನಗಿ ಹೊಂದಿದ ಎಲೆಕ್ಟ್ರಿಷಿಯನ್ ಮೂಲಕ ವಿದ್ಯುತ್ ವ್ಯವಸ್ಥೆ ಮಾಡಿಸಿಕೊಳ್ಳಬೇಕು. ಬೆಂಕಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ವೇಳೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸುರೇಶ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ, ಅಹ್ಮದ್ ಹುಸೇನ್ ಆದೋನಿ, ಮಂಜುನಾಥ ನಾಲಗಾರ, ಮಲ್ಲಿಕಾರ್ಜುನ ಗುಗ್ರಿ, ರವೀಂದ್ರ ಬಾಕಳೆ, ನಜಿರಸಾಬ್ ಮೂಲಿಮನಿ, ಪಿಡಿಒ ಶಿವಪುತ್ರಪ್ಪ ಬರಿದೆಲಿ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ ಪ್ರತಿಷ್ಠಾಪನೆ ಮಂಡಳಿ ಸದಸ್ಯರು ಇದ್ದರು.