ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಗಡುವು

| Published : Jun 01 2024, 12:45 AM IST / Updated: Jun 01 2024, 10:07 AM IST

ಸಾರಾಂಶ

ಸಚಿವ ಬಿ. ನಾಗೇಂದ್ರ ಅವರು ಜೂ.6ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ 7ನೇ ತಾರೀಖಿನಂದು ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌. ಮಹೇಶ್‌ ಹೇಳಿದರು.

 ಚಾಮರಾಜನಗರ :  ಸಚಿವ ಬಿ. ನಾಗೇಂದ್ರ ಅವರು ಜೂ.6ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ 7ನೇ ತಾರೀಖಿನಂದು ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌. ಮಹೇಶ್‌ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತ ವಿರೋಧಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿರುವುದನ್ನು ಸಾಬೀತು ಮಾಡಿದ್ದು, ಹಗರಣಗಳು ಮತ್ತು ತಪ್ಪು ತೀರ್ಮಾನಗಳು ಇದಕ್ಕೆ ಸಾಕ್ಷಿಯಾಗಿವೆ ಎಂದರು.

ರಾಜ್ಯದಲ್ಲಿ ಎಲ್ಲಾ ಬಡವರನ್ನು ಮೇಲೆತ್ತುವ ನಿಟ್ಟಿನಲ್ಲಿ ಯೋಜನೆಗಳನ್ನು ಮಾಡಿ ಅದಕ್ಕೆ ಗ್ಯಾರಂಟಿ ಎಂಬ ಹೆಸರು ನೀಡಿದ ಕಾಂಗ್ರೆಸ ಪಕ್ಷ ಎಲ್ಲಾ ಯೋಜನೆಗಳಿಗೂ ಅನುದಾನ ಮೀಸಲಿಡುವಂತೆ ಮೀಸಲಿಟ್ಟು ಆಯವ್ಯಯ ಮಂಡಿಸಬೇಕಿತ್ತು. ಆದರೆ 25 ಸಾವಿರ ಕೋಟಿ ರು.ಅನ್ನು ಪರಿಶಿಷ್ಟರ ವಿಶೇಷ ಘಟಕ ಯೋಜನೆಗೆ ಇಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ನೀಡುವ ಮೂಲಕ ದಲಿತ ವಿರೋಧಿ ನೀತಿಯನ್ನು ರಾಜಾರೋಷವಾಗಿ ಮಾಡಿದೆ ಎಂದು ಆರೋಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 147 ಕೋಟಿ ಹಣವನ್ನು ದುರುಪಯೋಗ ಮಾಡಿರುವ ಸಂಬಂಧ ಅಧಿಕಾರಿ ಚಂದ್ರಶೇಖರ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಬ್ಯಾಂಕಿನ ಮತ್ತು ಕಾನೂನಿನ ನಿಯಮ ಉಲ್ಲಂಘನೆ ಮಾಡಿ ತೆಲಂಗಾಣದ ಐಟಿ ಕಂಪನಿಗಳಿಗೆ ಹಣ ವರ್ಗಾವಣೆಯಾಗಿರುವುದರ ಬಗ್ಗೆ ಸಚಿವ ನಾಗೇಂದ್ರ ಅ‍ವರ ಮೇಲೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಸಂಬಂಧ ಸಚಿವರಾದ ಡಾ.ಪರಮೇಶ್ವರ್‌ ಹಾಗೂ ಪ್ರಿಯಾಂಕ್ ಖರ್ಗೆ ಅವರು ನಾಚಿಕೆ ಇಲ್ಲದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕ ನರೇಂದ್ರ ಅವರು ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಗೆದ್ದು ಪರಿಶಿಷ್ಟರ ಅಭಿವೃದ್ಧಿಗೆ ಕಾಳಜಿಯಿಂದ ಕೆಲಸ ಮಾಡದೇ ಹಗರಣದ ಬಗ್ಗೆ ಗೊತ್ತೇ ಇಲ್ಲ ಎಂದು ಹೇಳುವ ಅವರಿಗೆ ನಾಚಿಕೆಯಾಗಬೇಕು ಎಂದರು. ಸಚಿವ ನಾಗೇಂದ್ರ ‍ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವೇ ಸರ್ಕಾರ ಕಾನೂನಿಗೆ ಗೌರವ ಕೊಟ್ಟು ನಾಗೇಂದ್ರ ಅ‍ವರನ್ನು ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು. ಜೂ 6ರವರಗೆ ಗಡುವು ನೀಡಲಾಗಿದ್ದು ಜೂ.6ರ ನಂತರ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಅವರು ಹೊಸ ಉತ್ಸಾಹದಿಂದ ಕೆಲಸ ಮಾಡಲು ರಾಜಕೀಯಕ್ಕೆ ಬಂದಿದ್ದು, ಶಿಕ್ಷಕರ ಕ್ಷೇತ್ರದಲ್ಲಿ ಬದಲಾವಣೆಯನ್ನು ಬಯಸಿ ಕೆ. ವಿವೇಕಾನಂದ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಸರ್ಕಾರ ರಾಜ್ಯದಲ್ಲಿ ಎನ್‌ಇಪಿ ಶಿಕ್ಷಣ ಪದ್ಧತಿಯನ್ನು ಕೈಬಿಟ್ಟು ಎಸ್‌ಇಪಿ ಜಾರಿಗೊಳಿಸಲು ಮುಂದಾಗಿದ್ದು, ಎನ್‌ಇಪಿಯಲ್ಲಿರುವ ಅಂಶಗಳು ಮತ್ತು ಉದ್ದೇಶಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ. ಶಿಕ್ಷಕರು ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ವಿಶಾಲ ಮನೋಭಾವದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಮತ ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ವೃಷಬೇಂದ್ರ, ಅರಕಲವಾಡಿ ನಾಗೇಂದ್ರ, ಕಾಡಹಳ್ಳಿ ಕುಮಾರ್‌, ವೀರೇಂದ್ರ ಇದ್ದರು.