- ಮಲೇಬೆನ್ನೂರಲ್ಲಿ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ರೈತರ ಸಮಾಲೋಚನಾ ಸಭೆ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಭದ್ರಾ ನಾಲೆಯಲ್ಲಿ ಮಳೆಗಾಲದ ಬೆಳೆಗೆ ನೀರು ಹರಿಸಲು ಸರ್ಕಾರಕ್ಕೆ ಬರುವ ಬುಧವಾರವೇ ಡೆಡ್‌ಲೈನ್ ನೀಡಲು ಸೋಮವಾರ ಮಲೇಬೆನ್ನೂರು ನೀರಾವರಿ ಇಲಾಖೆ ಆವರಣದಲ್ಲಿ ನಡೆದ ರೈತರ ಸಮಾಲೋಚನಾ ಸಭೆ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ. ಸಭಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರನ್ನು ಕರೆಸಿ ನೀರು ಹರಿಸುವಂತೆ ಮನವಿ ಸಲ್ಲಿಸಲಾಯಿತು.ಭದ್ರಾ ಜಲಾಶಯ ವ್ಯಾಪ್ತಿ ನೀರು ಬಳಕೆದಾರರ ಸಂಘಗಳ ಮಹಾಮಂಡಳಿ ಅಧ್ಯಕ್ಷ ದ್ಯಾವಪ್ಪ ರೆಡ್ಡಿ ಅಧ್ಯಕ್ಷತೆ ಸಭೆಯಲ್ಲಿ ಭಾಗವಹಿಸಿದ್ದ ಹಲವು ಗ್ರಾಮಗಳ ಸಾವಿರಾರು ರೈತರು ಭತ್ತಕ್ಕೆ ವೈಜ್ಞಾನಿಕ ದರ ನಿಗದಿಗಿಂತ ಮಳೆಗಾಲದ ಬೆಳೆಗೆ ನೀರು ಹರಿಸಬೇಕು, ಮೇಲ್ಭಾಗದ ಕೈಗಾರಿಕೆಗಳಿಗೆ ನೀರಿಲ್ಲದಿದ್ದರೂ ಅಡ್ಡಿಯಿಲ್ಲ. ಜಮೀನಿಗೆ ನೀರು ಹರಿಸಿ ಆಹಾರ ಬೆಳೆಯುತ್ತೇವೆ ಎಂದು ರೈತ ಮುಖಂಡರು ಒತ್ತಾಯಿಸಿದರು.
ಹೊಳೆಸಿರಿಗೆರೆ ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ಮುಖ್ಯಮಂತ್ರಿ ಹೇಳಿದ ಮೇಲೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಸಮಿತಿ ಸದಸ್ಯರ ಸಭೆ ಮಾಡಿದರೆ ಕಾಡಾ ಯಾಕೆ ಬೇಕು? ಕಾಡಾ ಸದಸ್ಯರು ನಮ್ಮ ಜಿಲ್ಲೆಯವರೇ ಆಗಿದ್ದು, ಶೀಘ್ರವೇ ಸಭೆ ಕರೆದು ಕೆಳಭಾಗದ ರೈತರ ಹಿತಕಾಯಲು ಸಭೆ ನಡೆಸಿ ಸೂಕ್ತ ನಿರ್ಣಯ ತೆಗದುಕೊಳ್ಳಲು ಆಗ್ರಹಿಸಿದರು. ಜಿಲ್ಲೆಯಲ್ಲಿ ಒಬ್ಬ ಸಂಸದರು, ಇಬ್ಬರು ಸಚಿವರು, ಹಲವು ಶಾಸಕರು ಇದ್ದಾರೆ. ಅವರು ಮುಖ್ಯಮಂತ್ರಿ ಜತೆ ಮಾತಾಡುವ ಮನಸ್ಸು ಮಾಡಬೇಕಿದೆ. ಈ ಹಿಂದೆ ಜಲಾಶಯದಲ್ಲಿ ೧೫೫ ಅಡಿ ಇರುವಾಗಲೇ ನಾಲೆಗಳಲ್ಲಿ ನೀರು ಹರಿಸಿದ ನಿದರ್ಶನ ಇದೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಭದ್ರಾ ನಾಲೆಯಲ್ಲಿ ನೀರು ಹರಿಸುವ ವಿಷಯವಾಗಿ ಸಚಿವರಾದ ಮಧು ಬಂಗಾರಪ್ಪ, ರಾಮಲಿಂಗಾ ರೆಡ್ಡಿ ಹಾಗೂ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಜಲಾಶಯಗಳು ಮುಖ್ಯಮಂತ್ರಿ ಅಧೀನಕ್ಕೆ ಬರುತ್ತವೆ. ಆದರೂ ಈ ವಿಷಯದಲ್ಲಿ ಪಕ್ಷಾತೀತವಾಗಿ ರೈತರೆಲ್ಲ ಹೋರಾಟ ಮಾಡೋಣ, ಡಿಸಿ ಯವರಿಗೆ ಮನವಿ ಸಲ್ಲಿಸಿ ನಮ್ಮ ಹಕ್ಕು ಕೇಳೋಣ ಎಂದರು.
ಸಿರಿಗೆರೆ ಪಾಲಾಕ್ಷಪ್ಪ ಮಾತನಾಡಿ ನೂರಾರು ರೈತರು ಸಭೆ ಸೇರಿದ್ದಾರೆ. ನಮಗೆ ಆಹಾರ ಒದಗಿಸುವ ಜೀವನದ ಪ್ರಶ್ನೆಯಾಗಿದೆ. ರೈತಪರ ಕಾಳಜಿಯಿಂದ ಜಿಲ್ಲಾಧಿಕಾರಿಯೇ ಇಲ್ಲಿಗೆ ಆಗಮಿಸಿ ಮನವಿ ಸ್ವೀಕರಿಸಲಿ ಎಂದು ಪಟ್ಟುಹಿಡಿದರು. ಹಾಜರಿದ್ದ ರೈತರು ಆ ಸಲಹೆಗೆ ಒಪ್ಪಿಕೊಂಡು ಜಿಲ್ಲಾಮಟ್ಟದ ಅಧಿಕಾರಿಗಳೇ ಈ ಸ್ಥಳಕ್ಕೆ ಬರಲಿ ಎಂದರು. ಆಗ ಎಲ್ಲ ರೈತರು ರೈತ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿದರು.ಭದ್ರಾ ಅಚ್ಚುಕಟ್ಟು ನೀರು ಬಳಕೆದಾರರ ಮಂಡಳಿ ಅಧ್ಯಕ್ಷ ದ್ಯಾವಪ್ಪರೆಡ್ಡಿ ಹೆಚ್ಚುವರಿ ಎಡಿಸಿ ಅವರಿಗೆ ಮನವಿಯನ್ನು ಸಲ್ಲಿಸಿ ಆ.೧೩ರ ಗುರವಾರದಿಂದ ನಾಲೆಯಲ್ಲಿ ನೀರು ಹರಿಸಲು ಒತ್ತಾಯಿಸಿ ವಿವಿಧ ಹಂತದ ಹೋರಾಟ ನಡೆಸುತ್ತೇವೆ ಎಂದು ಪ್ರಕಟಿಸಿದರು. ಮನವಿ ಸ್ವೀಕರಿಸಿದ ನಂತರ ಎಡಿಸಿ ಶಿವಕುಮಾರ್ ಶೀಲವಂತ ಈ ವಿಷಯವಾಗಿ ಜಿಲ್ಲಾಧಿಕಾರಿಗೆ ರೈತರ ಪರಿಸ್ಥಿತಿ ವಿವರಿಸುತ್ತೇನೆ ಎಂದರು.
ಮಾಜಿ ಶಾಸಕ ಎಸ್.ರಾಮಪ್ಪ, ಅಕ್ರಮ ಪಂಪ್‌ಸೆಟ್ ವಿರುದ್ಧ ಹೋರಾಟಗಾರ ಶಿವರುದ್ರಪ್ಪ, ರಾಜಪ್ಪ, ವೀರಯ್ಯ, ಕುಮಾರ್, ಮುರಿಗೆಯ್ಯ, ಬಂಡೇರ ಪ್ರಭು, ಸೋಮಶೆಖರಪ್ಪ, ಹಾಲೇಶಪ್ಪ, ಕೆ.ಸಂಜೀವಪ್ಪ, ರಂಗನಗೌಡ, ಲಿಂಗರಾಜ್, ಹನುಮಂತಪ್ಪ, ಕರಿಬಸಪ್ಪ, ರೇವಣಸಿದ್ದಪ್ಪ, ನಾಗರಾಜ ರೆಡ್ಡಿ, ಕಮಲಾಪುರ ರಮೇಶ್, ಕಾಂತೇಶ ರೆಡ್ಡಿ, ಮಹೇಂದ್ರಪ್ಪ, ಮರುಳಸಿದ್ದಪ್ಪ, ಬಿ.ಜಿ.ಧನಂಜಯ, ಆಂಜನೇಯ ಹಾಗೂ ಕುಂಬಳೂರು, ಮಲೇಬೆನ್ನೂರು, ಬಸಾಪುರ, ಬೇವಿನಹಳ್ಳಿ, ಹಳ್ಳಿಹಾಳು, ಕೊಕ್ಕನೂರು, ಯಲವಟ್ಟಿ, ಕಡರನಾಯ್ಕನಹಳ್ಳಿ, ಪಾಳ್ಯ, ಸಿರಿಗೆರೆ, ನಂದಿತಾವರೆ, ನಿಟ್ಟೂರು, ಕಮಲಾಪುರ, ಕೊಮಾರನಹಳ್ಳಿ ಗ್ರಾಮಗಳ ನೂರಾರು ರೈತರು ಇದ್ದರು. ಪಿಎಸ್‌ಐ ಹಾರೂನ್ ಅಕ್ತರ್ ಬಂದೋಬಸ್ತ್ ಒದಗಿಸಿದ್ದರು.- - -
-ಚಿತ್ರ೧: ರೈತರ ಸಮಾಲೋಚನಾ ಸಭೆ.-ಚಿತ್ರ-೨. ಎಡಿಸಿಯವರಿಗೆ ಮನವಿ ಸಲ್ಲಿಕೆ.