ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಣ್ಣನ್ನು ಬಗೆದು ಮಾರಾಟ ಮಾಡುತ್ತಿದ್ದವರನ್ನು ಪ್ರಶ್ನಿಸಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.ತಾಲೂಕಿನ ಬಳ್ಳೂರು ಗ್ರಾಮದ ಸರ್ವೆ ನಂ. ೧೨ರಲ್ಲಿ ಸರ್ಕಾರ ನಿವೃತ್ತ ಸೈನಿಕರಿಗೆ ಜಾಗವನ್ನು ಮೀಸಲಿಟ್ಟಿದ್ದು, ಅದರಲ್ಲಿ ಕೆಲವರು ಹಗಲು ರಾತ್ರಿ ಎನ್ನದೆ ಮಣ್ಣನ್ನು ಬಗೆದು ಮಾರಾಟ ಮಾಡಿಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ಮಂಗಳವಾರ ಬಳ್ಳೂರು ಗ್ರಾಮದ ನಾಗರಾಜು ಎಂಬ ವ್ಯಕ್ತಿ ಟಿಪ್ಪರ್‌ಗಳಿಗೆ ಮಣ್ಣನ್ನು ತುಂಬಿಕೊಂಡು ಬೇರೆಡೆ ಸಾಗಿಸುತ್ತಿದ್ದರಿಂದ ಹಾಗೂ ಗ್ರಾಮದ ಒಳಭಾಗದಲ್ಲಿ ಮಣ್ಣುತುಂಬಿಕೊಂಡು ಹೋಗುತ್ತಿರುವುದರಿಂದ ರಸ್ತೆಯಲ್ಲಿ ಓಡಾಡಲು ತೊಂದರೆ ಆಗುತ್ತಿದ್ದು ಲಾರಿಗಳಲ್ಲಿ ಹೆಚ್ಚು ಮಣ್ಣನ್ನು ತುಂಬಿಕೊಂಡು ಹೋಗುವುದರಿಂದ ರಸ್ತೆ ಹಾಳಾಗಿ ಗುಂಡಿ ಬೀಳುತ್ತಿದೆ ಎಂದು ಗ್ರಾಮದ ಮಹಿಳೆ ರಾಜೇಶ್ವರಿ ಅವರು ನಾಗರಾಜ್ ಅವರನ್ನು ಕೇಳಿದ್ದಾರೆ. ಮಳೆಯಿಂದ ರಸ್ತೆಗೆ ಗುಂಡಿ ಬಿದ್ದ ಪರಿಣಾಮ ಡೆಂಘೀ, ಚಿಕುನ್ ಗುನ್ಯಾ ಇನ್ನಿತರ ಕಾಯಿಲೆಗಳು ಹರಡುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಇದರಿಂದ ಕೊಪಗೊಂಡ ನಾಗರಾಜ್ ಮನೆಯ ಮುಂಭಾಗ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಕೈ ಹಾಗೂ ತಲೆ ಎದೆ ಭಾಗಕ್ಕೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಅವರನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ದಾಖಲಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಟಿಪ್ಪರ್ ಗ್ರಾಮದ ಒಳಗಡೆ ತರಬೇಡಿ ಎಂದು ಹೇಳಿದರೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರ ಮೇಲೆ ಪ್ರಕರಣ ದಾಖಲಿಸಿ ಮಹಿಳೆಗೆ ನ್ಯಾಯದೊರಕಿಸಿಕೊಡಬೇಕೆಂದು ಆಗ್ರಹಿಸಿ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದರು.