ಸಾರಾಂಶ
ಶಿವಮೊಗ್ಗ: ಅರ್ಥವಾಗದ ಬೇರೆ ಭಾಷೆಗಳಿಗಿಂತ ಅರ್ಥವಾಗುವ ಮಾತೃಭಾಷೆಯಲ್ಲೇ ವ್ಯವಹರಿಸುವುದು ಸೂಕ್ತ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ಹಾಗೂ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾತೃ ಭಾಷಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರಚಲಿತ ವಿದ್ಯಾಮಾನದಲ್ಲಿ ಆಳುವ ಪಕ್ಷಗಳ ಮನೋಭಿಲಾಷೆ ಭಾವನಾತ್ಮಕ ಭಾರತಕ್ಕೆ ಗಂಡಾಂತರ ತರುತ್ತಿದೆ. ಜೊತೆಗೆ ನಮ್ಮೊಳಗಿನ ಕತ್ತಲೆಯ ಗೊಂದಲ ನಿವಾರಿಸುವ ಸಂದರ್ಭ ಈ ದಿನಾಚರಣೆಯ ಉದ್ದೇಶ ಎಂದು ತಿಳಿಸಿದರು.ಯುನೆಸ್ಕೋ ತೀರ್ಮಾನ ಮಾಡಿ ಮಾತೃ ಭಾಷೆ ಉಳಿಸಬೇಕಾದರೆ ಆ ಭಾಷೆಗೆ ಉತ್ತೇಜನ ನೀಡಬೇಕು ಎಂದಿದೆ. ವಿಶ್ವದಲ್ಲಿ ಎಂಟು ಸಾವಿರ ಭಾಷೆಗಳನ್ನು ಮಾತನಾಡುತ್ತಾರೆ. ಈ ದಿನದ ಉದ್ದೇಶ ಜನ ತಾವು ಮಾತನಾಡುವ ಮಾತೃ ಭಾಷೆ ಉಳಿಸಬೇಕು. ಯಾರೂ ಕೂಡ ಬೇರೆ ಭಾಷೆಯವರು ನಮ್ಮ ಮಾತೃ ಭಾಷೆ ಹತ್ತಿಕ್ಕಬಾರದು ಎಂದಾಗಿದೆ ಎಂದು ಹೇಳಿದರು.ಅಮ್ಮ ಮಗುವಿಗೆ ತನ್ನ ಎದೆ ಹಾಲು ಕುಡಿಸುವಾಗ ಮಾತೃ ಭಾಷೆ ಕಲಿಸುತ್ತಾಳೆ. 1947ರಲ್ಲಿ ದೇಶ ವಿಭಜನೆ ಧರ್ಮದ ಕಾರಣಕ್ಕೆ ಆಯಿತು. ಆದರೆ, 1952ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾ ವಿಭಜನೆಯಾಗಿದ್ದು, ಭಾಷೆಯ ಕಾರಣಕ್ಕೆ. ಬಂಗಾಳಿ ಮತ್ತು ಉರ್ದು ಭಾಷೆಯ ನಡುವಿನ ಭಾಷಾಭಿಮಾನವೇ ಈ ವಿಭಜನೆಗೆ ಕಾರಣವಾಯಿತು. ಮತ್ತು ಬಾಂಗ್ಲಾದಲ್ಲಿ ಅನೇಕ ವಿದ್ಯಾರ್ಥಿಗಳ ಸಾವಿಗೆ ಕಾರಣವಾಯಿತು. ಅದಕ್ಕಾಗಿಯೇ ಯುನೆಸ್ಕೋ ಮಾತೃ ಭಾಷೆಯ ದಿನಾಚರಣೆಯನ್ನು ಘೋಷಣೆ ಮಾಡಿತ್ತು ಎಂದು ತಿಳಿಸಿದರು. ದೇಶದಲ್ಲಿರುವ 1900 ಭಾಷೆಗಳಲ್ಲಿ ಪ್ರಮುಖ 20 ಭಾಷೆಗಳಲ್ಲಿ ಕನ್ನಡವೂ ಒಂದು. ನಾವು ಬಹುತ್ವದ ಭಾರತದಲ್ಲಿದ್ದೇವೆ. ನಮ್ಮ ಕನ್ನಡ ಭಾಷೆ ಅತ್ಯಂತ ಹಿರಿಯ ಭಾಷೆ. ಸಮೃದ್ಧ ಭಾಷೆ ಮತ್ತು ಶಕ್ತಿಯುತ ಭಾಷೆಯಾಗಿದೆ. 8 ಜ್ಞಾನಪೀಠ ಸಿಕ್ಕಿದೆ. ಆಳುವ ಸರ್ಕಾರಗಳು ಮತ್ತು ಪ್ರಜ್ಞಾವಂತರು ನಮ್ಮ ಭಾಷೆಯನ್ನು ನಿರ್ಲಕ್ಷಿಸಿವೆ ಎಂದರು.ಮಾತೃ ಭಾಷೆಯ ದಿನಾಚರಣೆಯ ಉದ್ದೇಶ ಕಲಿಯುವ ಸಂದರ್ಭದಲ್ಲಿ ಮಾತೃ ಭಾಷೆಗೆ ಮಹತ್ವ ನೀಡಬೇಕು. ಅದರ ಜೊತೆಗೆ ಪರಿಸರದ ಭಾಷೆ ಕೂಡ ಅವಶ್ಯಕ ಎಂದ ಅವರು, ಪ್ರಸ್ತುತ ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗಿ ಮಾತೃ ಭಾಷೆ ಕಳೆದುಕೊಳ್ಳುತ್ತಿದ್ದೇವೆ. ಇಂಗ್ಲಿಷ್ ಕಾರಣದಿಂದ ಬಹಳಷ್ಟು ಮಕ್ಕಳು ಎಸ್‍ಎಸ್‍ಎಲ್‍ಸಿಯಲ್ಲೇ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಗುಣಮಟ್ಟದ ಶಿಕ್ಷಣ ಕಾಣೆಯಾಗಿರುವುದೇ ಕಾರಣ ಎಂದು ಹೇಳಿದರು.ಇದು ಆತ್ಮಾವಲೋಕನದ ಸಂದರ್ಭ. ತ್ರ್ರಿಭಾಷಾ ಸೂತ್ರ ಅಳವಡಿಸಿಕೊಂಡರೇ ಮಾತ್ರ ಅನುದಾನ ನೀಡುತ್ತೇವೆ ಎಂಬ ಕೇಂದ್ರದ ಧೋರಣೆ ವಿರುದ್ಧ ಪ್ರತಿಭಟಿಸಬೇಕು ಎಂದರು.ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಧು, ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಚಿ ಕೆ.ವಿ.ಸುಂದರೇಶ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಭಾರತಿ ರಾಮಕೃಷ್ಣ, ಒಕ್ಕಲಿಗ ಸಂಘದ ನಿರ್ದೇಶಕರಾದ ನಾಗರಾಜ್, ಬಿ.ಎಸ್.ಆದಿಮೂರ್ತಿ, ಉಂಬ್ಳೇಬೈಲ್ ಮೋಹನ್ ಮತ್ತಿತರರಿದ್ದರು.