ಸಿದ್ದರಾಮಯ್ಯನವರೇ...ನನ್ನ ಧ್ವನಿ ಅಡಗುವುದು ಅಸಾಧ್ಯ: ನಾರಾಯಣಗೌಡ

| Published : Feb 09 2024, 01:45 AM IST

ಸಿದ್ದರಾಮಯ್ಯನವರೇ...ನನ್ನ ಧ್ವನಿ ಅಡಗುವುದು ಅಸಾಧ್ಯ: ನಾರಾಯಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯನವರೇ, ಡಿ.ಕೆ. ಶಿವಕುಮಾರ್ ರವರೇ ನೀವು ನನ್ನ ಧ್ವನಿ ಅಡಗಿಸಲು ಏನೇ ಪ್ರಯತ್ನ ಮಾಡಿದರೂ ಅದು ಮೂರ್ಖತನದ ಪರಮಾವಧಿಯೇ ಆಗಿರುತ್ತದೆ

ಕನ್ನಡಪ್ರಭ ವಾರ್ತೆ ಹಾಸನ

ಕನ್ನಡ ನಾಮಫಲಕ ಕುರಿತು ಬೆಂಗಳೂರಿನಲ್ಲಿ ಬೃಹತ್ ಹೋರಾಟ ಮಾಡಿ ಜೈಲು ಶಿಕ್ಷೆ ಅನುಭವಿಸಿ ವಾಪಸ್ ತವರು ಜಿಲ್ಲೆಗೆ ಆಗಮಿಸಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರನ್ನು ರೈಲ್ವೆ ನಿಲ್ದಾಣದಿಂದ ಬಿ.ಎಂ. ರಸ್ತೆ ಮೂಲಕ ಮೆರವಣಿಗೆಯಲ್ಲಿ ಕರೆತಂದು ತಾಲೂಕು ಪಂಚಾಯಿತಿ ವೃತ್ತದಲ್ಲಿ ಹೂವಿನ ಮಳೆ ಸುರಿಸಲಾಯಿತು.

ಅಭೂತಪೂರ್ವ ಸ್ವಾಗತ ಸ್ವೀಕರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಬೆಂಗಳೂರು ಕನ್ನಡೀಕರಣ ಆಗುತ್ತಿದ್ದು, ಜೊತೆಗೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳೂ ಕೂಡ ಕನ್ನಡೀಕರಣ ಆಗಬೇಕು ಎನ್ನುವ ಪ್ರತಿಜ್ಞೆಯನ್ನು ನಮ್ಮ ವೇದಿಕೆ ತೆಗೆದುಕೊಂಡಿದೆ. ಡಿಸೆಂಬರ್ ೨೭ರ ಹೋರಾಟ ರಾಜ್ಯದ ಪ್ರತಿ ಮನೆಯ ಮಾತಾಗಿ ಉಳಿದಿದೆ. ರಾಜ್ಯದಲ್ಲಿ ಉದ್ಯಮಗಳು, ಮಾಲ್ ಗಳು, ಕಟ್ಟಡಗಳು ತಲೆ ಎತ್ತಿವೆ, ಬೆಂಗಳೂರಿನಲ್ಲಿರುವ ಮಾಲ್ ಆಫ್ ಏಷಿಯಾದ ದೊಡ್ಡ ಮಳಿಗೆಯಲ್ಲಿ ಕನ್ನಡದ ನಾಮಫಲಕವನ್ನು ಹಾಕಿ ಎಂದು ಹೇಳಿದಕ್ಕೆ ನನ್ನ ವಿರುದ್ಧ ನ್ಯಾಯಾಲಯಕ್ಕೆ ಹೋದರು. ಆದರೆ, ಕನ್ನಡೀಕರಣಗೊಳಿಸಲು ನಮಗೆ ಮಾಲ್ ಆಫ್ ಏಷಿಯಾ ಒಂದೇ ಗುರಿಯಾಗದೇ ಇಡೀ ಬೆಂಗಳೂರನ್ನೇ ಗುರಿಯಾಗಿಟ್ಟುಕೊಂಡು ಶೇ.೬೦ ರಷ್ಟು ಕನ್ನಡ ನಾಮಫಲಕ ಅಳವಡಿಸಲು ಹೋರಾಟ ನಡೆಸಿದ್ದೆವು. ಆ ಹೋರಾಟವು ವಾತಾವರಣವನ್ನೇ ಬದಲಾಯಿಸಿತು. ಸರಕಾರದ ಮೇಲೆ ಒತ್ತಡ ಹಾಕಿದ್ದಲ್ಲದೇ ಸರಕಾರಕ್ಕೆ ಸಲ್ಲಿಸಬೇಕಾದ ಎಲ್ಲಾ ಕಪ್ಪ ಕಾಣಿಕೆ ಸಲ್ಲಿಸಿ ನಾನು ೧೪ ದಿನಗಳ ಕಾಲ ಜೈಲಿಗೆ ಹೋಗುವ ಹುನ್ನಾರವನ್ನೂ ಅನೇಕರು ಮಾಡಿದರು, ಆದರೂ ನಾನು ಹೆದರಲಿಲ್ಲ. ಜೈಲಿಂದ ಹೊರಬಂದಾಗ ಮತ್ತೆ ಜೈಲಿಗೆ ಕಳುಹಿಸಿದರು. ಆದರೂ ಸಹ ಅಂಜದೆ, ಅಳುಕದೇ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಸಿದ್ದರಾಮಯ್ಯನವರೇ, ಡಿ.ಕೆ. ಶಿವಕುಮಾರ್ ರವರೇ ನೀವು ನನ್ನ ಧ್ವನಿ ಅಡಗಿಸಲು ಏನೇ ಪ್ರಯತ್ನ ಮಾಡಿದರೂ ಅದು ಮೂರ್ಖತನದ ಪರಮಾವಧಿಯೇ ಆಗಿರುತ್ತದೆ ಎಂದರು.

ಬೆಂಗಳೂರು ಕನ್ನಡೀಕರಣಕ್ಕೆ ಫೆ.28ರವರೆಗೂ ಗಡುವು

ಈಗಾಗಲೇ ಸರಕಾರಕ್ಕೆ ಫೆ. ೨೮ರ ಗಡುವು ಕೊಡಲಾಗಿದ್ದು, ಅಷ್ಟರೊಳಗೆ ಇಡೀ ಬೆಂಗಳೂರು ಕನ್ನಡೀಕರಣ ಆಗದಿದ್ದರೆ ನಂತರ ಮತ್ತೊಂದು ದಿನ ಇಡೀ ಪ್ರಪಂಚವೇ ನೋಡಬೇಕು, ಆ ರೀತಿಯ ಹೋರಾಟಕ್ಕೆ ನಾವು ಸಿದ್ಧರಾಗಬೇಕು ಮತ್ತು ಸಜ್ಜಾಗಬೇಕು ಎನ್ನುವ ತೀರ್ಮಾನ ಮಾಡಿದ್ದೇವೆ. ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ತೀರ್ಮಾನ ಮಾಡಿ ಈಗಾಗಲೇ ೧೬ ಕೇಸುಗಳನ್ನು ನನ್ನ ಮೇಲೆ ಹಾಕಲಾಗಿದೆ. ಇನ್ನೂ ನೂರು ಕೇಸುಗಳನ್ನು ಹಾಕಿದರೂ ನಾರಾಯಣಗೌಡರ ಧ್ವನಿಯನ್ನು ನಿಮ್ಮ ಕೈಲಿ ಅಡಗಿಸುವುದಕ್ಕೆ ಸಾಧ್ಯವಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮೆರವಣಿಗೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಸಿ.ಡಿ. ಮನುಕುಮಾರ್, ಉಪಾಧ್ಯಕ್ಷ ಸೀತರಾಮು, ಕಾರ್ಮಿಕ ಘಟಕದ ಬೋರೇಗೌಡ, ಅಭಿಗೌಡ, ಯುವ ಘಟಕದ ಅಧ್ಯಕ್ಷ ಪ್ರೀತಮ್ ರಾಜ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಆಲೂರು ತಾಲೂಕು ಅಧ್ಯಕ್ಷ ನಟರಾಜ್, ತನುಗೌಡ, ರೇಖಾ ಮಂಜುನಾಥ್ ಇತರರು ಉಪಸ್ಥಿತರಿದ್ದರು.