ಸಾರಾಂಶ
ಪ್ರಕೃತಿ ವಿಕೋಪದಿಂದ ಉಂಟಾದ ಸಾವಾಗಿರುವುದರಿಂದ ಸಂಬಂಧಿಸಿದ ಇಲಾಖೆಯವರು ಮೃತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು
ಸಿದ್ದಾಪುರ: ತಾಲೂಕಿನ ವಾಜಗೋಡು ಪಂಚಾಯಿತಿ ವ್ಯಾಪ್ತಿಯ ಬಿಜ್ಜಾಳದ ಪರಿಶಿಷ್ಟ ಜಾತಿಯ ಯುವಕ ಗಣೇಶ ಮಂಜ ಹಸ್ಲರ್ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದು, ಅವನ ಸಾವಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವಂತೆ ಗ್ರಾಪಂ ಉಪಾಧ್ಯಕ್ಷ ಎಸ್.ಎಂ. ಭಟ್ಟ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. ೨೫ರ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಗಣೇಶ ಮಂಜ ಹಸ್ಲರ್ ಎನ್ನುವ ಯುವಕ ಕೃಷಿ ಕೆಲಸ ಮುಗಿಸಿ ಕೃಷಿ ಪರಿಕರಗಳನ್ನು ಸ್ವಚ್ಛಗೊಳಿಸಲು ಲಂಬಾಪುರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕಾಲುವೆ ಬಳಿ ತೆರಳಿದ್ದಾರೆ. ಅಂದು ವಿಪರೀತ ಮಳೆಯಾದ ಕಾರಣ ಕಾಲು ಜಾರಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರ ಮನೆಯಲ್ಲಿ ಅನಾರೋಗ್ಯಪೀಡಿತೆ ತಾಯಿ ಮತ್ತು ತಮ್ಮ ಮಾತ್ರ ಇದ್ದಾರೆ. ಮನೆಯ ಸಂಪೂರ್ಣ ಜವಾಬ್ದಾರಿ ಮೃತ ಗಣೇಶ ಹಸ್ಲರ್ ಮೇಲೆಯೇ ಇತ್ತು. ಇದು ಪ್ರಕೃತಿ ವಿಕೋಪದಿಂದ ಉಂಟಾದ ಸಾವಾಗಿರುವುದರಿಂದ ಸಂಬಂಧಿಸಿದ ಇಲಾಖೆಯವರು ಮೃತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ಮೃತನ ಸಹೋದರ ಮಹೇಶ ಹಸ್ಲರ್ ಮಾತನಾಡಿ, ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸದಸ್ಯರಾದ ಕೃಷ್ಣಮೂರ್ತಿ ನಾಯ್ಕ, ಸುರೇಶ ನಾಯ್ಕ, ಯಶೋದಾ ಹಸ್ಲರ್, ಗ್ರಾಮಾಭಿವೃದ್ಧಿ ಅಧಿಕಾರಿ ರಾಜೇಶ ನಾಯ್ಕ, ಮೃತ ಗಣೇಶನ ತಾಯಿ ಲಕ್ಷ್ಮಿ ಮಂಜ ಹಸ್ಲರ್, ಸಂಬಂಧಿಕ ದಯಾನಂದ ಹಸ್ಲರ್ ಇದ್ದರು.