ಸಾರಾಂಶ
- ಚನ್ನಗಿರಿ ತಾಲೂಕಿನ ಮೇದುಗೊಂಡನಹಳ್ಳಿ ಮಂಜುನಾಥ ಅಪರಾಧಿ
- - -ದಾವಣಗೆರೆ: ವರದಕ್ಷಿಣೆಗೆ ಪೀಡಿಸಿ ಮಹಿಳೆಯ ಸಾವಿಗೆ ಕಾರಣರಾದ ಪತಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಂಗಳವಾರ ತೀರ್ಪು ನೀಡಿದೆ.
ಚನ್ನಗಿರಿ ತಾಲೂಕಿನ ಮೇದುಗೊಂಡನಹಳ್ಳಿ ಗ್ರಾಮದ ಮಂಜುನಾಥ(30) ಶಿಕ್ಷೆಗೆ ಗುರಿಯಾದ ಅಪರಾಧಿ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಾರುತಿ ನಗರದ ನಿವಾಸಿ ನಿಂಗಪ್ಪ ನಾಗರಾಜಪ್ಪ ಎಂಬವರ 3ನೇ ಮಗಳು ಶೋಭಾರಾಣಿ ಜೊತೆಗೆ 3 ವರ್ಷಗಳ ಹಿಂದೆ ಆರೋಪಿ ಮಂಜುನಾಥ ಮದುವೆಯಾಗಿತ್ತು.ಮದುವೆ ಸಂದರ್ಭ 5 ತೊಲ ಬಂಗಾರ, 15 ತೊಲ ಬೆಳ್ಳಿ, ₹3 ಲಕ್ಷ ಖರ್ಚು ಮಾಡಿ, ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ದಿನದಿಂದಲೂ ಗಂಡ, ಆತನ ತಾಯಿ, ತಂದೆ, ನಾದಿನಿ ಸೇರಿಕೊಂಡು, ವರದಕ್ಷಿಣೆ ತರುವಂತೆ ಹೊಡೆದು, ಬೈದು, ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು. ಕಿರುಕುಳ ತಾಳದೇ, 2020ರ ಡಿ.14ರಂದು ಶೋಭಾರಾಣಿ ಮನೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಳು. ಮಗಳ ಸಾವಿಗೆ ಆಕೆಯ ಗಂಡ, ಅತ್ತೆ, ಮಾವ, ನಾದಿನಿಯೇ ಕಾರಣ ಎಂದು ನಾಲ್ವರ ಮೇಲೂ ಕ್ರಮ ಕೈಗೊಳ್ಳುವಂತೆ ಮೃತಳ ತಾಯಿ ನಿಂಗಮ್ಮ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ ತನಿಖಾಧಿಕಾರಿ ಪ್ರಶಾಂತ ಮನ್ನೋಳಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಆರೋಪಿ ಮಂಜುನಾಥನ ವಿರುದ್ಧ ಆರೋಪ ಸಾಬೀತಾಗಿದ್ದರಿಂದ ಆತನಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹40 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದರು. ದಂಡದ ಹಣದಲ್ಲಿ ₹35 ಸಾವಿರ ಸಂತ್ರಸ್ಥೆ ಕುಟುಂಬಕ್ಕೆ ನೀಡಲು, ಉಳಿದ ₹5 ಸಾವಿರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ, ತೀರ್ಪು ನೀಡಲಾಗಿದೆ.ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲ ಕೆ.ಎಸ್.ಸತೀಶ ನ್ಯಾಯ ಮಂಡನೆ ಮಾಡಿದರು. ತನಿಖಾಧಿಕಾರಿ ಡಿವೈಎಸ್‌ಪಿ ಪ್ರಶಾಂತ ಮನ್ನೋಳಿ, ಅಧಿಕಾರಿ, ಸಿಬ್ಬಂದಿ ಹಾಗೂ ನ್ಯಾಯ ಮಂಡನೆ ಮಾಡಿದ ಸರ್ಕಾರಿ ವಕೀಲ ಕೆ.ಎಸ್.ಸತೀಶ ಅವರನ್ನು ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಶ್ಲಾಘಿಸಿದ್ದಾರೆ.
- - - (-ಸಾಂದರ್ಭಿಕ ಚಿತ್ರ)