ಮೃತಳನ್ನು ಹೊಸಕೋಟೆ ತಾಲೂಕಿನ ಗೂಗುಟ್ಟಳ್ಳಿ ಮೂಲದ ಪ್ರಭಾವತಿ (೩೯) ಎಂದು ಗುರುತಿಸಲಾಗಿದೆ. ಭಾನುವಾರವೂ ಬಲವಂತವಾಗಿ ಕೆಲಸಕ್ಕೆ ಕರೆಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಸಂತೇಹಳ್ಳಿ ರಸ್ತೆಯಲ್ಲಿರುವ ಸಿಲ್ವರ್ ಕ್ರೆಸ್ಟ್ ಕ್ಲೋತಿಂಗ್ ಪ್ರೈವೇಟ್ ಲಿಮಿಟೆಡ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡದೆ ನಿರ್ಲಕ್ಷ ವಹಿಸಲಾಗಿದೆ ಎಂದು ಆರೋಪಿಸಿ ಮೃತಳ ಕುಟುಂಬಸ್ಥರು ಹಾಗೂ ಕರವೇ ಕಾರ್ಯಕರ್ತರು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ಶ್ರೀನಿವಾಸ್ ನೇತೃತ್ವದಲ್ಲಿ ಹೆಣವನ್ನು ಕಾರ್ಖಾನೆ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಿದರು.

ಮೃತಳನ್ನು ಹೊಸಕೋಟೆ ತಾಲೂಕಿನ ಗೂಗುಟ್ಟಳ್ಳಿ ಮೂಲದ ಪ್ರಭಾವತಿ (೩೯) ಎಂದು ಗುರುತಿಸಲಾಗಿದೆ. ಭಾನುವಾರವೂ ಬಲವಂತವಾಗಿ ಕೆಲಸಕ್ಕೆ ಕರೆಸಲಾಗಿತ್ತು. ಬೆಳಿಗ್ಗೆ ಕೆಸಲಕ್ಕೆ ಬಂದಿದ್ದ ಪ್ರಭಾವತಿ ಎದೆನೋವಿನಿಂದ ಅಸ್ವಸ್ಥಗೊಂಡು ಸಮಾರು ಎರಡು ಗಂಟೆಗಳ ಕಾಲ ನರಳಾಡಿದರೂ ಗಾರ್ಮೆಂಟ್ಸ್ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದು, ಇದು ಪ್ರಭಾವತಿಯ ಸಾವಿಗೆ ಪ್ರಮುಖ ಕಾರಣ ಎಂದು ಮೃತಳ ಕುಟುಂಬದವರು ಆರೋಪಿಸಿದ್ದಾರೆ.

ಹೃದಯಾಘಾತದಿಂದ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ನಿಖರ ಕಾರಣ ದೃಡಪಟ್ಟಿಲ್ಲ. ಮಹಿಳೆ ಮೃತಪಟ್ಟ ಬಳಿಕ ಗಾರ್ಮೆಂಟ್ಸ್ ಸಿಬ್ಬಂದಿ ಮೃತ ದೇಹವನ್ನು ಮನೆಗೆ ಕೊಂಡೂಯ್ದಿದ್ದರು. ಬಳಿಕ ಕುಟುಂಬಸ್ಥರು ಮೃತದೇಹವನ್ನು ಮತ್ತೇ ಗಾರ್ಮೆಂಟ್ಸ್ ಆವರಣಕ್ಕೆ ತಂದು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದರು.

ಪ್ರಭಾವತಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದರೆ ಮಗಳ ಜೀವ ಉಳಿಯುತ್ತಿತ್ತು ಎಂದು ಆರೋಪಿಸಿದ ಮೃತರ ಪೋಷಕರು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ವಿಷಯ ತಿಳಿದ ಕರವೇ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಸ್ಥಳಕ್ಕೆ ಬಂದರಲ್ಲದೇ ಸಾವಿಗೆ ಸಮಗ್ರ ತನಿಖೆ ನಡೆಸಬೇಕು. ನಿರ್ಲಕ್ಷ ಸಾಬೀತಾದರೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಮ್ಮ ಬೆಂಬಲಿಗರೂಡನೆ ಪ್ರತಿಭಟನೆ ನಡೆಸಿದರು.

ಮೃತ ಕುಟುಂಬ ಹಾಗೂ ಕರವೇ ಕಾರ್ಯಕರ್ತರು ಹೋರಾಟಕ್ಕೆ ಮಣಿದ ಗಾರ್ಮೆಂಟ್ಸ್ ಆಡಳಿತ ಮಂಡಳಿ ಮೃತ ಕುಟುಂಬಕ್ಕೆ ಪರಿಹಾರ ವಾಗಿ ೨೨ ಲಕ್ಷ ನೀಡುವುದಾಗಿ ಘೋಷಿಸಿದ ಮೇಲೆ ಪ್ರತಿಭಟನೆಕಾರರು ತಮ್ಮ ಪ್ರತಿಭಟನೆ ಕೈ ಬಿಟ್ಟರು.

ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ವಿ.ಮುರಳಿಧರ್, ಜಿಲ್ಲಾ ಉಪಾಧ್ಯಕ್ಷ ರಾಮನಾಥಪುರ ನಾರಾಯಣಸ್ವಾಮಿ, ಡಿ.ಸಿ.ಎಂ. ಚಂದ್ರಶೇಖರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸುಮಾ, ಕಾರ್ಮಿಕ ಘಟಕದ ಅಧ್ಯಕ್ಷ ಸಂತೇಹಳ್ಳಿ ಅಂಬರೀಶ್, ಶ್ರೀನಿವಾಸ ಗುಟ್ಕಾ, ನಗರಾಧ್ಯಕ್ಷ ನವೀನ್, ಚೇತನ್, ತಿಮ್ಮರಾಯಪ್ಪ, ಅರ್ಜುನ್, ಸೈಯದ್ ಮುಹಿಬ್ ಇನ್ನಿತರರು ಇದ್ದರು.