ರಾಮಕೃಷ್ಣ ಆಶ್ರಮದ ರಘುವೀರಾನಂದ ಶ್ರೀ ನಿಧನ

| Published : Sep 24 2024, 01:50 AM IST

ರಾಮಕೃಷ್ಣ ಆಶ್ರಮದ ರಘುವೀರಾನಂದ ಶ್ರೀ ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ವಿವೇಕಾನಂದರ ಸಂದೇಶಗಳಿಂದ ಹೆಚ್ಚು ಪ್ರವಾವಿತವಾಗಿದ್ದ ಸ್ವಾಮಿ ರಘುವೀರಾನಂದ ಮಹಾರಾಜ್‌, ಕಾಲೇಜು ದಿನಗಳಲ್ಲಿ ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಹುಬ್ಬಳ್ಳಿ:

ಇಲ್ಲಿಯ ರಾಮಕೃಷ್ಣ -ವಿವೇಕಾನಂದ ಆಶ್ರಮದ ಅಧ್ಯಕ್ಷ, ಸ್ವಾಮಿ ರಘುವೀರಾನಂದ ಮಹಾರಾಜ್‌ (60) ಸೋಮವಾರ ಬೆಳಗ್ಗೆ ನಿಧನರಾದರು.

ಕಲ್ಯಾಣನಗರದ 5ನೇ ಅಡ್ಡ ರಸ್ತೆಯಲ್ಲಿ ಇರುವ ಮಠದ ಆವರಣದಲ್ಲಿ ಬೆಳಗ್ಗೆ 10.30ರಿಂದ ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಬೆಳಗ್ಗೆ 11ಕ್ಕೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಆಶ್ರಮದ ಭಕ್ತರು ತಿಳಿಸಿದ್ದಾರೆ.

ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಕ್ತರು ಸ್ವಾಮೀಜಿಗಳ ಅಂತಿಮ ದರ್ಶನ ಪಡೆದರು. ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.

ಶ್ರೀಗಳ ಪೂರ್ವಾಶ್ರಮ:

1964ರಲ್ಲಿ ಜನಿಸಿದ ಶ್ರೀಗಳು, 1988ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾಮಕೃಷ್ಣ ಮಠದ ಸಂಪರ್ಕಕ್ಕೆ ಬಂದವರು. ಶ್ರೀರಾಮಕೃಷ್ಣರು, ವಿವೇಕಾನಂದರ ಸಂದೇಶಗಳಿಂದ ಹೆಚ್ಚು ಪ್ರವಾವಿತವಾಗಿದ್ದ ಶ್ರೀಗಳು, ಕಾಲೇಜು ದಿನಗಳಲ್ಲಿ ವಿವೇಕಾನಂದ ಯುವಕ ಸಂಘದ ಸದಸ್ಯರಾಗುವ ಮೂಲಕ ತಮ್ಮನ್ನು ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್‌ ಅವರಿಂದ ಸ್ಫೂರ್ತಿಗೊಂಡು, ಅವರ ಮಾರ್ಗದರ್ಶನದಲ್ಲಿ 1992ರಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸಂಕೀರ್ತನ ಸಭೆ ಪ್ರಾರಂಭಿಸಿದರು.

1994ರಲ್ಲಿ ಬೆಂಗಳೂರಲ್ಲಿ ರಾಮಕೃಷ್ಣ ಯೋಗಾಶ್ರಮವನ್ನು ಪ್ರಾರಂಭಿಸಿದರು. 2000ರಲ್ಲಿ ಧಾರವಾಡದ ರಾಮಕೃಷ್ಣ -ವಿವೇಕಾನಂದ ಆಶ್ರಮಕ್ಕೆ ಆಗಮಿಸಿ ಅಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದರು. ನಂತರ ಸ್ವಾಮಿ ಪುರುಷೋತ್ತಮಾನಂದಜಿ ಅವರ ನಿರ್ದೇಶನದಂತೆ ಹುಬ್ಬಳ್ಳಿಯಲ್ಲಿ 2002ರ ಮೇ 13ರಂದು ರಾಮಕೃಷ್ಣ -ವಿವೇಕಾನಂದ ಆಶ್ರಮ ಸ್ಥಾಪಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಶ್ರೀರಾಮಕೃಷ್ಣರು -ಶಾರದಾದೇವಿ -ವಿವೇಕಾನಂದರ (ದಿವ್ಯತ್ರಯರ) ಸಂದೇಶ ಪ್ರಚಾರ ಮಾಡಲು ಶ್ರಮಿಸಿದ್ದರು. ಸುಮಧರ ಕಂಠದಿಂದ ಇವರು ಮಾಡುತ್ತಿದ್ದ ಭಜನೆ ಜನರನ್ನು ಸೆಳೆಯುತ್ತಿತ್ತು. ಇವರ ಜೀವನದಿಂದ ಅನೇಕ ಯುವಕರು ಪ್ರಭಾವಿತರಾಗಿದ್ದಾರೆ.

ಶ್ರೀಗಳ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಎಚ್‌.ಕೆ.ಪಾಟೀಲ್‌, ಸಂಸದ ಜಗದೀಶ ಶೆಟ್ಟರ್‌, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.