ಸಾರಾಂಶ
ಮೂವರು ಸಹೋದರರು ಸ್ನಾನಕ್ಕೆಂದು ಅರಬ್ಬಿ ಸಮುದ್ರಕ್ಕೆ ಇಳಿದಾಗ ಆಕಸ್ಮಿಕವಾಗಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾರೆ. ದುರಂತದ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ರಕ್ಷಣೆಗೆ ಪ್ರಯತ್ನಿಸಿದರೂ, ಮೂವರ ಪೈಕಿ ಒಬ್ಬರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರಕಡಲ ಕಿನಾರೆಯಲ್ಲಿ ಸಮಯ ಕಳೆಯಲು ಬಂದ ಮೂವರು ಸಹೋದರರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ಸಂಜೆ ಕೋಡಿ ಸಮುದ್ರತೀರದಲ್ಲಿ ನಡೆದಿದೆ.ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬವರ ಮಕ್ಕಳಾದ ಧನರಾಜ್ (23) ಹಾಗೂ ದರ್ಶನ್ (18) ಮೃತಪಟ್ಟವರು. ಇನ್ನೋರ್ವ ಧನುಷ್ (20) ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೂವರು ಸಹೋದರರು ಸ್ನಾನಕ್ಕೆಂದು ಅರಬ್ಬಿ ಸಮುದ್ರಕ್ಕೆ ಇಳಿದಾಗ ಆಕಸ್ಮಿಕವಾಗಿ ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾರೆ. ದುರಂತದ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ರಕ್ಷಣೆಗೆ ಪ್ರಯತ್ನಿಸಿದರೂ, ಮೂವರ ಪೈಕಿ ಧನುಷ್ ಅವರನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ. ಸಾವನ್ನಪ್ಪಿರುವ ಇಬ್ಬರು ಸಹೋದರರ ಶವವನ್ನು ಮೇಲಕ್ಕೆ ಎತ್ತಲಾಗಿದೆ. ರಕ್ಷಣೆ ಮಾಡಲಾಗಿರುವ ಧನುಷ್ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಧನರಾಜ್, ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ವರ್ಕ್ ಫ್ರಮ್ ಹೋಂ ಅಡಿಯಲ್ಲಿ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಧನುಷ್, ಸುರತ್ಕಲ್ ಎನ್‌ಐಟಿಕೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದು, ದರ್ಶನ್ ಕುಂದಾಪುರದಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದರು.
ಕುಂದಾಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಂಜಪ್ಪ, ಎಸ್‌ಐಗಳಾದ ನಂಜಾ ನಾಯ್ಕ್ ಹಾಗೂ ಪುಷ್ಪ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.