ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿದ್ದರೂ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಉಸಿರಾಟದ ಸಮಸ್ಯೆಯಿಂದ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದು, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ ಘಟನೆ ವರದಿಯಾಗಿದೆ.

- ಸಾವಿನ ಬಗ್ಗೆ ತನಿಖೆಗೆ ತಜ್ಞವೈದ್ಯರ ಸಮಿತಿ: ಜಿಲ್ಲಾ ಸರ್ಜನ್

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆ ಮಾಡಿದ್ದರೂ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ಉಸಿರಾಟದ ಸಮಸ್ಯೆಯಿಂದ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೇಳೆ ಮೃತಪಟ್ಟಿದ್ದು, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ ಘಟನೆ ವರದಿಯಾಗಿದೆ.

ತಾಲೂಕಿನ ಕೈದಾಳೆ ಗ್ರಾಮದ ತಿರುಮಲಾ (34) ಮೃತ ಮಹಿಳೆ. ಕೈದಾಳೆ ಗ್ರಾಮದ ದೀಕ್ಷಿತ್‌- ತಿರುಮಲಾ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು, ಮಕ್ಕಳಾಗದಂತೆ ರಾಯಚೂರು ಜಿಲ್ಲೆ ಮೂಲದ ತಿರುಮಲಾಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮೇ 22ರಂದು ಲ್ಯಾಪರೋಸ್ಕೋಪಿಕ್ ಟ್ಯುಬೋಕ್ಟಮಿ ಶಸ್ತ್ರಚಿಕಿತ್ಸೆ ಮಾಡಿದ್ದರು ಎನ್ನಲಾಗಿದೆ. ಆದರೆ, ತಿರುಮಲಾ ಮತ್ತೆ ಗರ್ಭಿಣಿಯಾಗಿದ್ದರು. ಹಾಗಾಗಿ, ತಿರುಮಲಾ ಅವರನ್ನು ಪತಿ ದೀಕ್ಷಿತ್ ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದರು.

ಎರಡೂವರೆ ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿಸಿ, ಮತ್ತೊಮ್ಮೆ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ಚನ್ನಾಗಿಯೇ ಇದ್ದ ತಿರುಮಲಾ ಅವರಿಗೆ ಭಾನುವಾರ ಮಧ್ಯಾಹ್ನದಿಂದ ಉಸಿರಾಟದ ಸಮಸ್ಯೆ ಆಗಿದ್ದರಿಂದ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ತಿರುಮಲಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಗೃಹಿಣಿ ತಿರುಮಲಾ ಸಾವಿಗೆ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದೆ. ಆಕೆಯ ಸಾವಿಗೆ ಕಾರಣರಾದ ವೈದ್ಯರನ್ನು ತಕ್ಷಣ ಸೇವೆಯಿಂದ ವಜಾ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮೃತ ತಿರುಮಲಾ ಅವರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಬಡಾವಣೆ ಪೊಲೀಸರು ಮೃತಳ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.

- - -

(ಬಾಕ್ಸ್‌)

* ತಿರುಮಲಾ ಸಾವಿನ ನಿಖರ ಕಾರಣ ತಿಳಿಯಲು ತಜ್ಞವೈದ್ಯರ ಸಮಿತಿ: ಸರ್ಜನ್‌

ಜಿಲ್ಲಾಸ್ಪತ್ರೆಯಲ್ಲಿ ಕೈದಾಳೆಯ ತಿರುಮಲಾ ಸಾವನ್ನಪ್ಪಿದ ಹಿನ್ನೆಲೆ ಅವರ ಸಾವಿಗೆ ನಿಖರ ಕಾರಣ ತಿಳಿಯಲು ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು ಎಂದು ಜಿಲ್ಲಾಸ್ಪತ್ರೆ ಸರ್ಜನ್‌ ಡಾ. ಎಂ.ಬಿ.ನಾಗೇಂದ್ರಪ್ಪ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಮಲಾಗೆ ಲ್ಯಾಪರೋಸ್ಕೋಪಿಕ್ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆನಂತರ ಅವರು 12 ವಾರ, 6 ದಿನಗಳ ಗರ್ಭಿಣಿಯಾಗಿದ್ದರು. ಈ ಹಿಂದೆ ಎರಡು ಮಕ್ಕಳಿಗೆ ಜನ್ಮ ನೀಡಿದ್ದ ವೇಳೆಯೇ ಅವರಿಗೆ ಸಿಜೇರಿಯನ್ ಆಗಿತ್ತು. ಈಗ 4 ತಿಂಗಳಾಗಿದ್ದು, ಮುಂದುವರಿಸುವಂತೆ ವೈದ್ಯರು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಗ ಕುಟುಂಬಸ್ಥರು ಬೇಡವೆಂದು, ಗರ್ಭಪಾತ ಮಾಡಿ, ಆಪರೇಷನ್ ಮಾಡುವಂತೆ ಹೇಳಿದ್ದಾರೆ. ಆಗ ಗರ್ಭಕೋಶ ಓಪನ್ ಮಾಡಿ, ತೆಗೆದಿದ್ದಾರೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ತಿರುಮಲಾಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಹೇಳಿದರು.

ಉಸಿರಾಟದ ತೊಂದರೆ ಆಗಿದ್ದರಿಂದ ಭಾನುವಾರ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ತಿರುಮಲಾ ಮರಣ ಹೊಂದಿದ್ದಾರೆ. ಈ ಸಾವಿಗೆ ನಿಖರ ಕಾರಣ ಅರಿಯಲು ತಜ್ಞ ವೈದ್ಯರ ಸಮಿತಿ ರಚಿಸುತ್ತೇವೆ. ಶಸ್ತ್ರಚಿಕಿತ್ಸೆಯಾಗಿ 4 ದಿನಗಳ ಬಳಿಕೆ ಮಹಿಳೆ ಸಾವನ್ನಪ್ಪಿದ್ದಾರೆ. ಇನ್ಫೆಕ್ಷನ್ ಆಗಿ ಸಾವನ್ನಪ್ಪಿರಬಹುದು. ಟ್ಯುಬೆಕ್ಟಮಿ ಫೇಲ್ಯೂರ್ ಆದರೆ ಪರಿಹಾರ ನೀಡಲು ಅವಕಾಶವಿದೆ. 100ಕ್ಕೆ 2 ಜನಕ್ಕೆ ಟ್ಯುಬೆಕ್ಟಮಿ ಫೇಲ್ಯೂರ್ ಆಗುತ್ತದೆ ಎಂದು ಡಾ.ನಾಗೇಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ.

- - -

-12ಕೆಡಿವಿಜಿ3: ತಿರುಮಲಾ.