ಒಂದೂವರೆ ವರ್ಷಗಳ ಹಿಂದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಬೀಭತ್ಸವಾಗಿ ಕೊಲೆ ಮಾಡಿದ್ದ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ಗೆ ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿ ಮಹತ್ತರ ತೀರ್ಪು ನೀಡಿದೆ.
ಸೋಮವಾರಪೇಟೆ: ಒಂದೂವರೆ ವರ್ಷಗಳ ಹಿಂದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯನ್ನು ಬೀಭತ್ಸವಾಗಿ ಕೊಲೆ ಮಾಡಿದ್ದ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ಗೆ ಜಿಲ್ಲಾ ನ್ಯಾಯಾಲಯ ಮರಣ ದಂಡನೆ ವಿಧಿಸಿ ಮಹತ್ತರ ತೀರ್ಪು ನೀಡಿದೆ.
೨೦೨೪ರ ಮೇ ೯ ರಂದು ಸೂರ್ಲಬ್ಬಿಯ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಮೀನಾ(೧೫) ಎಂಬ ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅದೇ ಗ್ರಾಮದ ನಿವಾಸಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ತನ್ನನ್ನು ವಿವಾಹವಾಗುವಂತೆ ಒತ್ತಡ ಹೇರಿದ್ದಾನೆ. ವಿವಾಹದ ಆಸಕ್ತಿಯಿಲ್ಲದ ಮೀನಾ ಮದುವೆಯನ್ನು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಮೀನಾ ಅಪ್ರಾಪ್ತೆಯಾಗಿದ್ದು, ಮದುವೆಯನ್ನು ತಡೆಹಿಡಿಯುವಂತೆ ಜಿಲ್ಲಾ ಚೈಲ್ಡ್ ಹೆಲ್ಪ್ ಲೈನ್ಗೆ ಶಾಲಾ ಶಿಕ್ಷಕಿಯೋರ್ವರು ದೂರು ನೀಡಿದ್ದ ಹಿನ್ನಲೆಯಲ್ಲಿ ಇಲಾಖೆಯ ಅಧಿಕಾರಿಗಳು ಸೂರ್ಲಬ್ಬಿ ಗ್ರಾಮಕ್ಕೆ ಭೇಟಿ ನೀಡಿ, ಮೀನಾಳಿಗೆ ಮದುವೆ ಮಾಡಲು ಕಾನೂನಿನ ತೊಡಕಿದೆ. ಅಪ್ರಾಪ್ತೆಯಾಗಿರುವುದರಿಂದ ೧೮ ವಯಸ್ಸು ಆಗುವವರೆಗೂ ಮದುವೆ ಮಾಡಬಾರದಾಗಿ ಆಕೆಯ ಪೋಷಕರಿಗೆ ಮತ್ತು ಆರೋಪಿ ಓಂಕಾರಪ್ಪನಿಗೆ ಕೂಡ ತಾಕೀತು ಮಾಡಿದ್ದರು ಎನ್ನಲಾಗಿದೆ.ಇದರಿಂದ ಕುಪಿತಗೊಂಡ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಕತ್ತಿಯಿಂದ ಮೀನಾಳ ರುಂಡವನ್ನು ಕಡಿದು ಮನೆಯ ಸಮೀಪವೇ ಇರುವ ಕಾಡಿನಲ್ಲಿರುವ ಮರಕ್ಕೆ ಕೂದಲಿನಿಂದ ಕಟ್ಟಿ ಪರಾರಿಯಾಗಿದ್ದ. ಮಾಹಿತಿ ಕಲೆ ಹಾಕಿದ ಸೋಮವಾರಪೇಟೆ ಪೊಲೀಸರು, ಆರೋಪಿಯನ್ನು ಸೆರೆ ಹಿಡಿಯಲು ಬಲೆ ಬೀಸಿದಾಗ, ಸೂರ್ಲಬ್ಬಿ ಕಾಡಿನೊಳಗಿರುವುದು ತಂಡಕ್ಕೆ ಗೋಚರವಾಗಿತ್ತು. ಪೊಲೀಸರು ಆರೋಪಿ ಓಂಕಾರಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಎರಡುವರೆ ವರ್ಷಗಳು ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದು, ಶುಕ್ರವಾರ ಮಡಿಕೇರಿಯ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು, ಓಂಕಾರಪ್ಪ ಅಲಿಯಾಸ್ ಪ್ರಕಾಶ್ಗೆ ಮರಣ ದಂಡನೆ ಹಾಗೂ ೮೦ಸಾವಿರ ದಂಡ ವಿಧಿಸಿ ಮಹತ್ತರ ತೀರ್ಪು ನೀಡಿದ್ದಾರೆ.ತೀರ್ಪಿನ ಕುರಿತು ಮೃತ ಬಾಲಕಿಯ ಸಹೋದರ ದಿಲೀಪ್ ಸಂತಸ ವ್ಯಕ್ತಪಡಿಸಿದ್ದು, ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರವಾಗಿ ಬರುವುದರ ಕುರಿತು ಖಚಿತವಾದ ನಂಬಿಕೆ ಮತ್ತು ಭರವಸೆ ಇತ್ತು. ಅದರಂತೆ ನಮಗೆ ನ್ಯಾಯ ದೊರೆತಿದೆ ಎಂದು ಹೇಳಿದ್ದಾರೆ.ಮೃತ ಬಾಲಕಿ ಮೀನಾಳ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರುದ್ರಪ್ರಸನ್ನ ವಾದ ಮಂಡಿಸಿದ್ದರು.