ಸಾರಾಂಶ
-ಶಾಸಕರು ಜಿಲ್ಲೆಯನ್ನು ನೀರಾವರಿಯನ್ನಾಗಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರರಿಗೆ ಮನವಿ
-------ಕನ್ನಡ ಪ್ರಭ ವಾರ್ತೆ.ಮೊಳಕಾಲ್ಮುರು
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅನುದಾನ ಬಿಡುಗಡೆಗೆ ಚರ್ಚಿಸಬೇಕಾದ ಜಿಲ್ಲೆಯ ಶಾಸಕರು ಸದನಕ್ಕೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ತರುವ ಮೂಲಕ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯನ್ನು ನೀರಾವರಿಯನ್ನಗಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ತಾಲೂಕು ಆಡಳಿತ ಸೌಧ ಆವರಣದಲ್ಲಿ ಮನವಿ ಸಲ್ಲಿಸಿದ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರಾಜ್ಯದ ಬಹುತೇಕ ಸಚಿವರು ಮತ್ತು ಶಾಸಕರು ಗೈರು ಹಾಜರಾಗುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯ ಕುರಿತು ಚರ್ಚಿಸಬೇಕಾದ ಸದನದಲ್ಲಿ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಹಾಜರಾಗಿದ್ದಾರೆ. ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ಮೂಲಕ ಸದನಕ್ಕೆ ಆಗೌರವ ತೋರುತ್ತಿದ್ದಾರೆ. ಆರಿಸಿ ಕಳುಹಿಸಿದ ಮತದಾರರಿಗೆ ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಉತ್ತರ ಕರ್ನಾಟಕದ ಶಾಸಕರು ಕೃಷ್ಣಾ ಮೇಲ್ದಂಡೆ ಯೋಜನೆಗೆ 1ಲಕ್ಷ ಕೋಟಿ ಮೀಸಲಿಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಬಯಲು ಸೀಮೆಯ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ಕುರಿತು ಜಿಲ್ಲೆಯ ಯಾವೊಬ್ಬ ಶಾಸಕರು ಚರ್ಚಿಸದೇ ಜಿಲ್ಲೆಯ ಜನರ ಅಭಿವೃದ್ಧಿಯನ್ನು ಮರೆಯುತ್ತಿದ್ದಾರೆ. ಯೋಜನೆಗೆ ಅಗತ್ಯವಾಗಿರುವ ಅನುದಾನ ಇಲ್ಲದೆ, ಯೋಜನೆ ಕುಂಟುತ್ತಾ ಸಾಗುತ್ತಿದ್ದರೂ ಶಾಸಕರು ಮತ್ತು ಸಚಿವರು ಚಕಾರ ಎತ್ತದಿರುವುದು ಕಾಮಗಾರಿ ವಿಳಂಬವಾಗಲು ಪ್ರಮುಖ ಕಾರಣ. ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಭದ್ರಾ ಮೇಲ್ದಂಡೆ ಯೋಜನೆಯ ಪೂರ್ಣಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದಿದ್ದಾರೆ.ಭದ್ರಾ ಮೇಲ್ದಂಡೆ ಅನುದಾನಕ್ಕಾಗಿ ಜಿಲ್ಲೆಯ ಶಾಸಕರು ಒಟ್ಟಾಗಿ ಸದನದಲ್ಲಿ ಚರ್ಚಿಸಬೇಕು.
ತ್ವರಿತ ಹಣ ಬಿಡುಗಡೆ ಮಾಡುವ ಮೂಲಕ ಎಲ್ಲಾ ತಾಲೂಕಿಗೂ ನೀರು ಹರಿಸಿ ಜಿಲ್ಲೆಯನ್ನು ಸಂಪೂರ್ಣವಾಗಿ ನೀರಾವರಿಯನ್ನಾಗಿಸಬೇಕು. ಮನೆಗಳಿಗೆ ಕರೆನ್ಸಿ ಮೀಟರ್ ಅಳವಡಿಸುತ್ತಿರುವ ಯೋಜನೆಯನ್ನು ವಾಪಾಸ್ ಪಡೆಯಲು ಒತ್ತಾಯಿಸಬೇಕು ಎಂದಿದ್ದಾರೆ.ಹಗಲಲ್ಲಿ ಉಳಿಸಿದ ವಿದ್ಯುತ್ ನ್ನು ರೈತರ ಪಂಪ್‌ಸೆಟ್ ಗಳಿಗೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರ ಜಮೀನುಗಳಲ್ಲಿ ಹೆಚ್ಚು ಕಾಮಗಾರಿ ಕೈಗೊಳ್ಳಬೇಕು. ಪ್ರತಿ ಮನೆಗಳಿಗೆ ಶೌಚಾಲಯ ನಿರ್ಮಿಸುವ ಮೂಲಕ ಬಯಲು ಮುಕ್ತ ತಾಲೂಕನ್ನಾಗಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡ ರೆಡ್ಡಿ ಹಳ್ಳಿ ಬಸವ ರೆಡ್ಡಿ, ಜಿಲ್ಲಾ ಮುಖಂಡ ನಿಜಲಿಂಗಪ್ಪ, ತಾಲೂಕು ಅಧ್ಯಕ್ಷ ಕೋನಸಾಗರ ಮಂಜುಣ್ಣ, ಮಲ್ಲಹಳ್ಳಿ ರವಿಕುಮಾರ್,ಡಿ. ಟಿ.ಮಂಜುನಾಥ, ಮೇಸ್ತ್ರಿ ಪಾಪಯ್ಯ, ಬಸವರಾಜ, ಮಹೇಶ್, ಪಿ.ಟಿ. ಹಟ್ಟಿ ವೀರಣ್ಣ, ಎಚ್.ವಿ.ವೀರಣ್ಣ, ಬೂದಪ್ಪ, ಸಾಗರ ಪ್ರಕಾಶ್, ಚೌಳಕೆರೆ ಹೇಮಣ್ಣ, ದೊಡ್ಡ ಪಾಪಯ್ಯ, ದೊಡ್ಡ ಮಲ್ಲಯ್ಯ, ಎಸ್. ಟಿ.ಚಂದ್ರಣ್ಣ, ಡಿ.ಬಿ.ಕೃಷ್ಣ ಮೂರ್ತಿ, ಪ್ರಶಾಂತ ರೆಡ್ಡಿ, ದಾನಸೂರಯ್ಯ ಇದ್ದರು.