ಬೆಳಗಾವಿ ಅಧಿವೇಶನದಲ್ಲಿ ವಿಶೇಷ ಚೇತನರ ಸಮಸ್ಯೆಗಳ ಕುರಿತು ಚರ್ಚೆ

| Published : Oct 29 2024, 01:00 AM IST

ಸಾರಾಂಶ

ಚಾಮರಾಜನಗರ ಸರ್ಕಾರಿ ಪೇಟೆ ಶಾಲಾವರಣದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಬಿಆರ್‌ಸಿ ಸಮಗ್ರ ಕರ್ನಾಟಕ ಸಹಯೋಗದಲ್ಲಿ ನಡೆದ ’ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬೆಳಗಾವಿ ಅಧಿವೇಶನದಲ್ಲಿ ವಿಶೇಷಚೇತನರ ಸಮಸ್ಯೆಗಳ ಕುರಿತು ಸರ್ಕಾರದ ಗಮನಸೆಳೆಯುವುದಾಗಿ ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಭರವಸೆ ನೀಡಿದರು.ನಗರದ ಸರ್ಕಾರಿ ಪೇಟೆ ಶಾಲಾವರಣದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಬಿಆರ್‌ಸಿ ಸಮಗ್ರ ಕರ್ನಾಟಕ ಸಹಯೋಗದಲ್ಲಿ ಸೋಮವಾರ ನಡೆದ ವಿಕಲಚೇತನರ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ವಿಶೇಷಚೇತನ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರು ಪಡುವ ಕಷ್ಟ ಅಷ್ಟಿಷ್ಟಲ್ಲ. ಇದರ ಜತೆಗೆ ಬಸ್‌ಪಾಸ್‌ದರದ ಏರಿಕೆ, ಮಾಸಾಶನ ಏರಿಕೆಯಾಗದಿರುವುದು ವಿಶೇಷಚೇತನರಿಗೆ ಸಮಸ್ಯೆಯಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಇವರ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಚರ್ಚಿಸಲಾಗುವುದು ಎಂದರು.

ನಗರಸಭೆ ಸದಸ್ಯ ಅಬ್ರಾರ್ ಅಹಮದ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿ ವಿಶೇಷಚೇತನರಿಗೆ ಮಾಸಾಶನ ಹೆಚ್ಚಳ ಏರಿಕೆ ಮಾಡಿದ್ದು, ರಾಜ್ಯದಲ್ಲಿ ಕೇವಲ ೧೨೦೦ ರಿಂದ ೧೪೦೦ ರವರಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಸರ್ಕಾರ ಕನಿಷ್ಠ ೫ ಸಾವಿರದವರಗೆ ಮಾಸಾಶನ ನೀಡಬೇಕು, ಉಚಿತ ಬಸ್ ಪಾಸ್ ವಿತರಿಸಲು ಕ್ರಮವಹಿಸಬೇಕು, ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವುದು ಸಂಬಂಧಪಟ್ಟ ಇಲಾಖಾಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.ಇದೇ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ವಿಶೇಷಚೇತನರಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ನಗರಸಭೆ ಅಧ್ಯಕ್ಷ ಸುರೇಶ್, ಸದಸ್ಯ ಎಂ.ಮಹೇಶ್, ಚುಡಾಅಧ್ಯಕ್ಷ ಮಹಮದ್ ಅಸ್ಗರ್, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ರಮೇಶ್, ಡಿವೈಪಿಸಿಗಳಾದ ಲಕ್ಷ್ಮೀಪತಿ, ನಾಗೇಂದ್ರ, ಬಿಇಒ ಹನುಮಶೆಟ್ಟಿ, ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಬಿಆರ್‌ಸಿ ರಾಜೀವ್, ಎಂಆರ್‌ಡಬ್ಲ್ಯೂ ರಾಜೇಶ್, ಸಿಆರ್‌ಪಿ ಶಿವಮೂರ್ತಿ,ಎಪಿಸಿ ಅನ್ನಪೂರ್ಣ, ಮಕ್ಕಳ ಪೋಷಕರು, ವೈದ್ಯರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಜರಿದ್ದರು.