ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ತನ್ನ ಮಗನಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ ಮಾಡಿಕೊಂಡರೆ, ಕಣ್ಮುಂದೆಯೇ ಮೊಮ್ಮಗನ ಸಾವಿನ ನರಳಾಟ ಕಂಡು ಅಜ್ಜಿ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ತನ್ನ ಮಗನಿಗೆ ವಿಷವಿಕ್ಕಿ ತಾಯಿ ಆತ್ಮಹತ್ಯೆ ಮಾಡಿಕೊಂಡರೆ, ಕಣ್ಮುಂದೆಯೇ ಮೊಮ್ಮಗನ ಸಾವಿನ ನರಳಾಟ ಕಂಡು ಅಜ್ಜಿ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ನಗರದಲ್ಲಿ ಸೋಮವಾರ ನಡೆದಿದೆ.ಕೋರಮಂಗಲ ಸಮೀಪದ ತಾವರೆಕೆರೆಯ 2ನೇ ಅಡ್ಡರಸ್ತೆಯ ಮಾದಮ್ಮ (60), ಸುಧಾ (35) ಹಾಗೂ ಮೋನಿಷ್ (14) ಮೃತ ದುರ್ದೈವಿಗಳು.
ಮನೆಯಲ್ಲಿ ವಿಷ ಸೇವಿಸಿ ಬೆಳಗ್ಗೆ 9 ಗಂಟೆಯಲ್ಲಿ ಉಪಾಹಾರದಲ್ಲಿ ಮಗ ಮೋನಿಷ್ ಜತೆ ವಿಷಪ್ರಾಶನ ಮಾಡಿ ಸುಧಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮೊಮ್ಮಗನ ಸಾವು-ಬದುಕಿನ ಒದ್ದಾಟ ಕಂಡು ಭಯಗೊಂಡ ಅಜ್ಜಿ ಮಹದೇವಮ್ಮ ಅವರು, ತಮ್ಮ ಹಿರಿಯ ಪುತ್ರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರಿಗೆ ಮೃತರ ಪುತ್ರಿ ವಿಷಯ ಮುಟ್ಟಿಸಿದ್ದಾರೆ. ಆದರೆ ರಕ್ಷಣೆಗೆ ಪೊಲೀಸರು ಆಗಮಿಸುವ ವೇಳೆಗೆ ಮಾದಮ್ಮ ಸಹ ಆಘಾತದಿಂದ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.ಮಾದಮ್ಮ ಮೂಲತಃ ತಮಿಳುನಾಡು ರಾಜ್ಯದ ಧರ್ಮಪುರ ಜಿಲ್ಲೆಯವರಾಗಿದ್ದು, ಹಲವು ವರ್ಷಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದು ನೆಲೆಸಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿದ್ದ ತಮ್ಮ ಕಿರಿಯ ಪುತ್ರಿ ಸುಧಾ ಹಾಗೂ ಮೊಮ್ಮಗನ ಜತೆ ಅವರು ನೆಲೆಸಿದ್ದರು. ಮೊದಲು ಮನೆಗೆಲಸ ಮಾಡಿಕೊಂಡು ಮಹೇದವಮ್ಮ ಜೀವನ ಸಾಗಿಸುತ್ತಿದ್ದರು. ಬಳಿಕ ಮಗಳ ಜತೆ ಅವರು ಬಿರಿಯಾನಿ ಹಾಗೂ ಚಿಪ್ಸ್ ಮಾರಾಟ ಆರಂಭಿಸಿದ್ದರು.
ಆದರೆ ಇತ್ತೀಚೆಗೆ ಈ ವ್ಯವಹಾರದಲ್ಲಿ ಸುಧಾ ಅವರಿಗೆ ಹಣಕಾಸು ನಷ್ಟವಾಗಿ ತೊಂದರೆ ಎದುರಾಗಿತ್ತು. ಈ ನೋವಿನಲ್ಲೇ ಮಗನ ಜತೆ ಆತ್ಮಹತ್ಯೆಗೆ ಸುಧಾ ನಿರ್ಧರಿಸಿದ್ದರು ಎನ್ನಲಾಗಿದೆ.ಸಾಲಗಾರರ ಕಾಟ: ಮೂರು ತಿಂಗಳ ಹಿಂದೆ ಚಿಪ್ಸ್ ಹಾಗೂ ಬಿರಿಯಾನಿ ಕೇಂದ್ರವನ್ನು ಬೇರೆಯವರಿಗೆ ತಿಂಗಳ ಬಾಡಿಗೆಗೆ ಸುಧಾ ಕೊಟ್ಟಿದ್ದರು. ಆದರೆ ಹಣ ನೀಡದೆ ಬಾಡಿಗೆದಾರರ ಕಿರಿಕಿರಿ ಮಾಡಿದ್ದ. ಈ ಗಲಾಟೆಯಿಂದ ಸುಧಾ ಸಂಕಷ್ಟಕ್ಕೆ ಸಿಲುಕಿದ್ದರು. ಇನ್ನು ತಮ್ಮ ಪರಿಚಯಸ್ಥರು ಹಾಗೂ ಕುಟುಂಬದವರಿಂದ ಸುಧಾ ಸಾಲ ಮಾಡಿದ್ದರು. ಆದರೆ ಸಕಾಲಕ್ಕೆ ಸಾಲ ಮರಳಿಸಲಾಗದೆ ಅವರಿಗೆ ಸಾಲಗಾರರು ಕಾಟ ಕೊಡುತ್ತಿದ್ದರು. ಈ ಬೆಳವಣಿಗೆಯಿಂದ ಮನನೊಂದ ಅವರು, ಮಗನ ಜತೆ ಆತ್ಮಹತ್ಯೆ ನಿರ್ಧರಿಸಿದ್ದರು. ಅಂತೆಯೇ ತಮ್ಮೂರು ಧರ್ಮಪುರಿಗೆ ಹೋಗಿದ್ದ ಸುಧಾ, ಭಾನುವಾರ ರಾತ್ರಿ ಮರಳಿದ್ದರು. ನಂತರ ಸೋಮವಾರ ಬೆಳಗ್ಗೆ ಮಗನ ಜತೆ ವಿಷ ಸೇವಿಸಿ ಆತ್ಮಹತ್ಯೆಗೆ ಸುಧಾ ಶರಣಾಗಿದ್ದಾರೆ. ತನ್ನ ಕಣ್ಮುಂದೆ ಮೊಮ್ಮಗನ ನರಳಾಟ ನೋಡಿದ ಮಹದೇವಮ್ಮ ಅವರಿಗೆ ಸಹ ಆಘಾತವಾಗಿದೆ ಎಂದು ಮೂಲಗಳು ಹೇಳಿವೆ.
ಈ ಸಂಬಂಧ ಸದ್ದಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರ ದರ್ಶನ ಚೆನ್ನಾಗಿ ಆಯ್ತು!ತಮಿಳುನಾಡಿನ ಧರ್ಮಪುರಿಗೆ ಹೋಗಿದ್ದ ಸುಧಾ ಅವರು, ಭಾನುವಾರ ರಾತ್ರಿ ಮನೆಗೆ ಮರಳಿದ್ದರು. ಆಗ ತಮ್ಮ ಅಕ್ಕನಿಗೆ ಕರೆ ಮಾಡಿ ದೇವರ ದರ್ಶನ ಚೆನ್ನಾಗಿಯೇ ಆಯಿತು. ಒಳ್ಳೆಯದಾಗುತ್ತದೆ ಎಂದು ಹೇಳಿ ಖುಷಿಯಿಂದ ಸುಧಾ ಮಾತನಾಡಿದ್ದರು. ಇದೇ ಅಕ್ಕ-ತಂಗಿಯರ ಮಧ್ಯೆ ನಡೆದ ಕೊನೆ ಸಂಭಾಷಣೆ ಆಗಿದೆ. ತಮ್ಮೂರಿಗೆ ಹೋಗಿ ದೇವರ ದರ್ಶನ ಮುಗಿಸಿ ಬಂದ ಸುಧಾ, ಮರು ದಿನವೇ ತನ್ನ ಮಗನ ಜತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಡೆತ್‌ನೋಟ್‌ನಲ್ಲಿ ಸಾಲಗಾರರ ಹೆಸರು?ಮೃತರ ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಇದರಲ್ಲಿ ತಮ್ಮ ಆರ್ಥಿಕ ಸಂಕಷ್ಟದ ಬಗ್ಗೆ ಸುಧಾ ಬರೆದಿದ್ದು, ತಮಗೆ ಸಾಲ ಕೊಟ್ಟ ವ್ಯಕ್ತಿಯೊಬ್ಬರ ಹೆಸರು ಉಲ್ಲೇಖವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ಘಟನೆಯಿಂದ ಮೃತರ ಬಂಧುಗಳು ದುಃಖದಲ್ಲಿದ್ದಾರೆ. ಹೀಗಾಗಿ ಘಟನೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಎರಡು ದಿನಗಳ ಬಳಿಕ ಮೃತರ ಸಂಬಂಧಿಕರನ್ನು ಪ್ರಶ್ನಿಸಿ ಹೇಳಿಕೆ ಪಡೆಯಲಾಗುತ್ತದೆ. ಈ ಹಣಕಾಸು ವ್ಯವಹಾರದ ಬಗ್ಗೆ ಮೃತ ಸುಧಾ ಅವರ ಬ್ಯಾಂಕ್ ವಹಿವಾಟಿನ ವಿವರ ಪಡೆದು ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮಗ ಹುಟ್ಟುವ ಮುನ್ನವೇ ಪತಿ ದೂರ
ತಮ್ಮ ಮಗ ಹುಟ್ಟುವ ಮುನ್ನವೇ ಪತಿಯಿಂದ ಸುಧಾ ದೂರವಾಗಿದ್ದರು. ಗರ್ಭಿಣಿಯಾಗಿದ್ದಾಗಲೇ ಕೌಟುಂಬಿಕ ವಿಚಾರಗಳಿಗೆ ಪತಿ ಜತೆ ಅವರಿಗೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿ ಸ್ವತಂತ್ರವಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಮೋನಿಷ್ ಓದುತ್ತಿದ್ದ. ಆದರೆ ಧೈರ್ಯವಂತ ಸುಧಾ ಅವರು ಯಾಕೆ ಆತ್ಮಹತ್ಯೆ ನಿರ್ಧಾರ ಮಾಡಿದರು ಎಂಬುದು ನಿಗೂಢ ಪ್ರಶ್ನೆಯಾಗಿದೆ.ತಾವರೆಕೆರೆಯಮಾದಮ್ಮ ಹಾಗೂ ಅವರ ಮಗಳು, ಮೊಮ್ಮಗನ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಆತ್ಮಹತ್ಯೆ ಹೇಗಾಗಿದೆ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
-ಸಾರಾ ಫಾತಿಮಾ, ಡಿಸಿಪಿ, ಆಗ್ನೇಯ ವಿಭಾಗ