ದ.ಕ.ದಲ್ಲಿ ಚೊಚ್ಚಲ ಸ್ಪರ್ಧಿಗಳು, ವಿದ್ಯಾವಂತರ ಫೈಟ್‌!

| Published : Mar 25 2024, 12:45 AM IST

ದ.ಕ.ದಲ್ಲಿ ಚೊಚ್ಚಲ ಸ್ಪರ್ಧಿಗಳು, ವಿದ್ಯಾವಂತರ ಫೈಟ್‌!
Share this Article
  • FB
  • TW
  • Linkdin
  • Email

ಸಾರಾಂಶ

‘ಬುದ್ಧಿವಂತರ ಜಿಲ್ಲೆ’ ಎನಿಸಿಕೊಂಡಿರುವ ದ.ಕ. ಕ್ಷೇತ್ರದಲ್ಲಿ ಘಟಾನುಘಟಿಗಳು ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ. ಆದರೆ ಕಳೆದ ನಾಲ್ಕು ದಶಕಗಳಿಂದ ಯಾವ ಚುನಾವಣೆಯಲ್ಲೂ ಎರಡೂ ಪಕ್ಷದಲ್ಲೂ ಹೊಸಬರು ಹಾಗೂ ವಿದ್ಯಾವಂತರು ಮುಖಾಮುಖಿ ಆದದ್ದೇ ಇಲ್ಲ. ಅದು ಈ ಬಾರಿ ಸಾಕಾರಗೊಂಡಿದೆ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕ್ಯಾ. ಬ್ರಿಜೇಶ್‌ ಚೌಟ ಹಾಗೂ ಕಾಂಗ್ರೆಸ್‌ನಿಂದ ಪದ್ಮರಾಜ್‌ ಆರ್‌. ಅವರ ಕದನ ಕಣ ರಂಗೇರಿದೆ. ಇವರಿಬ್ಬರ ಸ್ಪರ್ಧೆಯ ಮೂಲಕ ಏಕಕಾಲದಲ್ಲಿ ಪ್ರಬಲ ಎರಡೂ ಪಕ್ಷದಲ್ಲೂ ಹೊಸ ಮುಖ ಹಾಗೂ ವಿದ್ಯಾವಂತರ ನಡುವಿನ ಅಪರೂಪದ ಚುನಾವಣಾ ಫೈಟ್‌ಗೆ ಜಿಲ್ಲೆ ಸಾಕ್ಷಿಯಾಗುತ್ತಿದೆ.

‘ಬುದ್ಧಿವಂತರ ಜಿಲ್ಲೆ’ ಎನಿಸಿಕೊಂಡಿರುವ ದ.ಕ. ಕ್ಷೇತ್ರದಲ್ಲಿ ಘಟಾನುಘಟಿಗಳು ಗೆದ್ದು ಸಂಸತ್‌ ಪ್ರವೇಶಿಸಿದ್ದಾರೆ. ಆದರೆ ಕಳೆದ ನಾಲ್ಕು ದಶಕಗಳಿಂದ ಯಾವ ಚುನಾವಣೆಯಲ್ಲೂ ಎರಡೂ ಪಕ್ಷದಲ್ಲೂ ಹೊಸಬರು ಹಾಗೂ ವಿದ್ಯಾವಂತರು ಮುಖಾಮುಖಿ ಆದದ್ದೇ ಇಲ್ಲ. ಅದು ಈ ಬಾರಿ ಸಾಕಾರಗೊಂಡಿದೆ.

ಕ್ಯಾ. ಬ್ರಿಜೇಶ್‌ ಚೌಟ ಅವರು ಐಐಎಂನಲ್ಲಿ ಉನ್ನತ ವ್ಯಾಸಂಗ ಪಡೆದು ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದರೆ, ಪದ್ಮರಾಜ್‌ ಆರ್‌. ಕಾನೂನು ಪದವೀಧರರು, ನೋಟರಿಯೂ ಆಗಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ಇಬ್ಬರೂ ಯುವ ಅಭ್ಯರ್ಥಿಗಳು. ಲೋಕಸಭೆಗೆ ವಿದ್ಯಾವಂತರನ್ನು ಕಳುಹಿಸಬೇಕು ಎಂದು ಕೆಲ ಸಮಯದ ಹಿಂದೆ ಜಾಲತಾಣದಲ್ಲಿ ಸಣ್ಣ ರೂಪದ ಅಭಿಯಾನ- ಚರ್ಚೆ ನಡೆದಿತ್ತು. ಪಕ್ಷಾತೀತವಾಗಿ ಮತದಾರರ ಆಶಯ ಈಗ ಫಲ ಕೊಟ್ಟಿದೆ.

ಚುನಾವಣೆಗೇ ಹೊಸಬರು:

ವಿಶೇಷವೆಂದರೆ ಇಬ್ಬರೂ ಅಭ್ಯರ್ಥಿಗಳು ಈಗ ಲೋಕಸಭೆಗೆ ಮಾತ್ರವಲ್ಲ, ಚುನಾವಣೆ ಸ್ಪರ್ಧೆಗೇ ಹೊಸಬರು. ಗ್ರಾ.ಪಂ.ನಿಂದ ಹಿಡಿದು ಯಾವುದೇ ಹಂತದ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ನೇರವಾಗಿ ಲೋಕಸಭೆಗೆ ಸ್ಪರ್ಧಿಸುತ್ತಿರುವವರು. ಎರಡು ಪಕ್ಷದಲ್ಲೂ ಸ್ಪರ್ಧೆಗೆ ಆಕಾಂಕ್ಷಿಗಳಾಗಿದ್ದ ಘಟಾನುಘಟಿ ನಾಯಕರಿದ್ದರೂ ಹೊಸ ಮುಖಗಳಿಗೆ ಈ ಬಾರಿ ಅವಕಾಶ ನೀಡಿರುವುದು ವಿಶೇಷ.

1977ರ ಲೋಕಸಭೆ ಚುನಾವಣೆಯಲ್ಲಿ ವಕೀಲರಾಗಿದ್ದ ಜನಾರ್ದನ ಪೂಜಾರಿ ಮೊದಲ ಬಾರಿ ನೇರವಾಗಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಆಗ ಕೊಡಗು ಜಿಲ್ಲೆ ಮಂಗಳೂರು ಕ್ಷೇತ್ರವೇ ಆಗಿದ್ದರಿಂದ ಅವರ ಎದುರಾಳಿಯಾಗಿ ಜನತಾ ಪಕ್ಷದಿಂದ ಕೊಡಗಿನ ಎ.ಕೆ. ಸುಬ್ಬಯ್ಯ ಕಣದಲ್ಲಿದ್ದರು. ಬಳಿಕ ಪ್ರಬಲ 2 ಪಕ್ಷಗಳಿಂದ ಹೊಸಬರು ಮುಖಾಮುಖಿ ಆದದ್ದೇ ಇಲ್ಲ.

ಕ್ಷೇತ್ರದಲ್ಲಿ ಜನಾರ್ದನ ಪೂಜಾರಿ ಸತತವಾಗಿ ನಾಲ್ಕು ಬಾರಿ ಗೆಲವು ಸಾಧಿಸಿದ್ದರೆ, ಬಳಿಕ ಬಿಜೆಪಿಯ ಧನಂಜಯ ಕುಮಾರ್‌ ಕೂಡ ಸತತ ನಾಲ್ಕು ಸಲ ಜಯ ಸಾಧಿಸಿದ್ದರು. 2004ರಲ್ಲಿ ಬಿಜೆಪಿಯ ಡಿವಿ ಸದಾನಂದ ಗೌಡ ಆಯ್ಕೆಯಾಗಿದ್ದರು. ಬಳಿಕ ನಳಿನ್‌ ಕುಮಾರ್‌ ಕಟೀಲು ಹ್ಯಾಟ್ರಿಕ್‌ ವಿಜಯ ದಾಖಲಿಸಿದರು. ವರ್ಷ ಕಳೆಯುತ್ತಿದ್ದಂತೆ ಹಳಬರದೇ ಫೈಟ್‌ ಎಂಬಂತಾಗಿತ್ತು. ಆ ಸಂಪ್ರದಾಯಕ್ಕೆ ಈ ಚುನಾವಣೆಯಲ್ಲಿ ಬ್ರೇಕ್‌ ಬಿದ್ದಿದೆ. ಎರಡೂ ಪಕ್ಷದಲ್ಲೂ ಈಗ ಹೊಸ ಅಭ್ಯರ್ಥಿಗಳದ್ದೇ ಕಾರುಬಾರು!

ಬಹುತೇಕರು ವಕೀಲರು!

ಕಳೆದ ಐದು ದಶಕಗಳಲ್ಲಿ ಲೋಕಸಭೆಗೆ ಆಯ್ಕೆಯಾದವರಲ್ಲಿ ಬಹುತೇಕರು ವಕೀಲರು ಎನ್ನುವ ಹಿರಿಮೆ ದ.ಕ. (ಹಿಂದಿನ ಮಂಗಳೂರು) ಕ್ಷೇತ್ರದ್ದು. ಜನಾರ್ದನ ಪೂಜಾರಿ ಲೋಕಸಭೆ ಸ್ಪರ್ಧೆಗಿಂತ ಮೊದಲು ಹೆಸರಾಂತ ಕ್ರಿಮಿನಲ್‌ ಲಾಯರ್‌ ಆಗಿದ್ದವರು. ನಂತರ ಆಯ್ಕೆಯಾದ ಧನಂಜಯ ಕುಮಾರ್‌ ಕೂಡ ಎಲ್‌ಎಲ್‌ಬಿ ಪದವೀಧರರೇ. 2004ರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾದ ಮಾಜಿ ಸಿಎಂ ಡಿವಿ ಸದಾನಂದ ಗೌಡರೂ ವಕೀಲರೇ ಎನ್ನುವುದು ವಿಶೇಷ. ಸತತವಾಗಿ 32 ವರ್ಷಗಳ ಕಾಲ ವಕೀಲರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.