ಸಾರಾಂಶ
ಮುಂಡಗೋಡ: ತಾಲೂಕಿನ ಜನತೆ ಶತಮಾನದಿಂದ ಕಂಡಂತಹ ಬಸ್ ಡಿಪೋ ಕನಸು ಈಗ ಸಾಕಾರಗೊಂಡಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿರುವ ಸಾರಿಗೆ ಸಂಸ್ಥೆ ಬಸ್ ಡಿಪೋ ಕಾರ್ಯಾರಂಭಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.ಮುಂಡಗೋಡದಲ್ಲಿ ಡಿಪೋ ನಿರ್ಮಾಣ ಪ್ರಸ್ಥಾವನೆ ಸುಮಾರು ೫ ಬಾರಿ ಬೋರ್ಡ್ ಮೀಟಿಂಗ್ ನಲ್ಲಿ ತಿರಸ್ಕೃತವಾಗಿತ್ತು. ಇದರ ನಡುವೆಯೂ ಶತ ಪ್ರಯತ್ನದ ಫಲವಾಗಿ ಡಿಪೋ ನಿರ್ಮಾಣವಾಗಿದ್ದು, ಈಗ ಕಾರ್ಯಾರಂಭ ಕೂಡ ಆಗಿದೆ. ವಿದ್ಯಾರ್ಥಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ಡಿಪೋ ಕಾರ್ಯ ನಿರ್ವಹಿಸಬೇಕು ಎಂಬುವುದು ನಮ್ಮ ಮೂಲಭೂತ ಉದ್ದೇಶವಾಗಿದೆ. ಸಾರ್ವಜನಿಕರಿಗೂ ಅನುಕೂಲವಾಗಬೇಕೊ ಜೊತೆಗೆ ಸಂಸ್ಥೆಗೂ ಲಾಭವಾಗಬೇಕು. ನಮ್ಮ ಸಂಸ್ಥೆ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಬರಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಇಲ್ಲಿವರೆಗೆ ಹಾನಗಲ್, ಯಲ್ಲಾಪುರ, ಶಿರಸಿ ಹಾಗೂ ಯಲ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಡಿಪೋ ಬಸ್ ಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ಸ್ವಂತ ಡಿಪೋ ಆಗಿದೆ. ಕಳೆದ ವರ್ಷವೇ ಡಿಪೋ ಉದ್ಘಾಟನೆಯಾದರೂ ಕೂಡ ಬಸ್ ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ತಾಂತ್ರಿಕ ತೊಂದರೆಯಿಂದ ಡಿಪೋ ಕಾರ್ಯಾರಂಭಿಸುವುದು ವಿಳಂಬವಾಯಿತು. ಹಿಂದಿನ ಸರ್ಕಾರದಲ್ಲಿ ಬಸ್ ಗಳನ್ನು ಖರೀದಿ ಹಾಗೂ ಸಿಬ್ಬಂದಿ ನೇಮಕಾತಿ ನಡೆದಿರಲಿಲ್ಲ. ಈಗ ಸಕಲ ಸಿದ್ಧತೆಯೊಂದಿಗೆ ಡಿಪೋ ಪ್ರಾರಂಭೋತ್ಸವವಾಗಿದೆ. ತಕ್ಷಣ ಎಲ್ಲ ಸಮಸ್ಯೆ ಪರಿಹಾರವಾಗುವುದಿಲ್ಲ. ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಪ್ರಾರಂಭವಾಗಲಿವೆ ಎಂದ ಅವರು, ಬನವಾಸಿಯಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ವಿ.ಎಸ್ ಪಾಟೀಲ ಮಾತನಾಡಿ, ಗ್ಯಾರಂಟಿ ಶಕ್ತಿ ಯೋಜನೆ ಬಂದ ಬಳಿಕ ರಾಜ್ಯ ಸಾರಿಗೆ ಸಂಸ್ಥೆ ಲಾಭದಲ್ಲಿ ಸಾಗುತ್ತಿದೆ. ಹಿಂದೆಲ್ಲ ನಷ್ಟದಲ್ಲಿ ನಡೆಯುತ್ತಿದ್ದ ಸಂಸ್ಥೆ ಈಗ ಗ್ಯಾರಂಟಿ ಯೋಜನೆ ಮೂಲಕ ಲಾಭದತ್ತ ಬಂದಿದೆ. ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರು ನಿಜವಾದ ಶ್ರಮ ಜೀವಿಗಳು. ಸಂಸ್ಥೆಯಲ್ಲಿ ಇನ್ನೂ ಸಾಕಷ್ಟು ಬದಲಾವಣೆಗಳಾಗಬೇಕಿದೆ. ಸಾರ್ವಜನಿಕರು ಸಹ ಸರ್ಕಾರಿ ಬಸ್‌ನಲ್ಲಿಯೇ ಸಂಚಾರ ಮಾಡಬೇಕು. ಇದರಿಂದ ಸಂಸ್ಥೆಗೂ ಲಾಭ ಹಾಗೂ ಜನರಿಗೂ ಭದ್ರೆತೆ ಇರುತದೆ ಎಂದರು.
ಕೆಎಸ್ಆರ್ಟಿಸಿ ಶಿರಸಿ ವಿಭಾಗ ನಿಯಂತ್ರಾಣಾಧಿಕಾರಿ ಬಸವರಾಜ ಅಮ್ಮನವರ ಪ್ರಾಸ್ತಾವಿಕ ಮಾತನಾಡಿದರು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಗ್ಯಾರಂಟಿ ತಾಲೂಕಾಧ್ಯಕ್ಷ ರಾಜಶೇಖರ ಹಿರೇಮಠ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಪಪಂ ಅಧ್ಯಕ್ಷೆ ಜಯಸುಧಾ ಬೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಮಾಜಿ ಎಪಿಎಮ್ಸಿ ಉಪಾಧ್ಯಕ್ಷ ಬಾಬಣ್ಣ ಕೋಣಕೇರಿ, ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ, ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೇಕರ, ಪ್ರವೀಣ ಶೇಟ್ ಉಪಸ್ಥಿತರಿದ್ದರು. ಪ್ರಕಾಶ ನಾಯ್ಕ ಸ್ವಾಗತಿಸಿದರು.