ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರ ಆಪ್ತ ಕಾರ್ಯದರ್ಶಿ ಎಂದು ಅಧಿಕಾರಿಗಳಿಗೆ ವಂಚನೆ: ಸೆರೆ

| Published : Nov 10 2024, 01:47 AM IST / Updated: Nov 10 2024, 08:44 AM IST

Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರ ಆಪ್ತ ಕಾರ್ಯದರ್ಶಿ ಎಂದು ಅಧಿಕಾರಿಗಳಿಗೆ ವಂಚನೆ: ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ರಘುನಾಥ (38) ಬಂಧಿತ ಆರೋಪಿ. ಈತ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ವರ್ಗಾವಣೆ ಮಾಡಿಸಿ ಕೊಡುವುದಾಗಿ ಹಣ ಪಡೆದು ವಂಚಿಸುತ್ತಿದ್ದ. ಈ ಸಂಬಂಧ ದಾಖಲಾದ ಎರಡು ಪ್ರತ್ಯೇಕ ದೂರುಗಳ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಚಳ್ಳಕೆರೆ ಉಪ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ಎನ್‌.ಕಾವ್ಯಾ ಅವರಿಗೆ ಕರೆ ಮಾಡಿ ತಾನು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ಬೇರೆಡೆಗೆ ವರ್ಗಾವಣೆ ಮಾಡಿಸಿ ಕೊಡಲು ₹2 ಲಕ್ಷಕ್ಕೆ ಬೇಡಿಕೆ ಇರಿಸಿದ್ದ. ಬಳಿಕ ಕಾವ್ಯಾ ಅವರಿಂದ ₹80 ಸಾವಿರ ಪಡೆದು ವಂಚಿಸಿದ್ದ. ಈ ಸಂಬಂಧ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ। ನಾಗರಾಜ್‌ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಂತೆಯೇ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ, ವರ್ಗಾವಣೆ ಮಾಡಿಸಿ ಕೊಡುವುದಾಗಿ ಆಮಿಷವೊಡುತ್ತಿದ್ದ. ಈ ಸಂಬಂಧ ಡಿ.ಕೆ.ಶಿವಕುಮಾರ್‌ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್‌ ಅವರು ಅನಾಮಧೇಯ ವ್ಯಕ್ತಿ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಎರಡೂ ಪ್ರಕರಣಗಳ ಸಂಬಂಧ ತನಿಖೆಗೆ ಇಳಿದ ಪೊಲೀಸರು, ತಾಂತ್ರಿಕ ಸುಳಿವುಗಳ ಜಾಡು ಹಿಡಿದು ಆರೋಪಿ ರಘುನಾಥನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ರಘುನಾಥ ತಾನು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಹಲವರಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದವೀಧರನಿಗೆ ವಂಚನೆಯೇ ವೃತ್ತಿ: ಆರೋಪಿ ರಘುನಾಥ ಎಂಬಿಎ ಪದವೀಧರನಾಗಿದ್ದು, ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದಾನೆ. ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ. ವರ್ಗಾವಣೆಗೆ ಪ್ರಯತ್ನಿಸುತ್ತಿರುವ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ಸಂಗ್ರಹಿಸಿಕೊಂಡು ಬಳಿಕ ಕರೆ ಮಾಡಿ ತಾನು ಸಚಿವರ ಆಪ್ತ ಕಾರ್ಯದರ್ಶಿ, ವಿಶೇಷ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಳ್ಳುತ್ತಿದ್ದ. 

ಬಳಿಕ ವರ್ಗಾವಣೆ ವಿಚಾರ ಪ್ರಸ್ತಾಪಿಸಿ, ವರ್ಗಾವಣೆ ಮಾಡಿಸಿ ಕೊಡುವುದಾಗಿ ನಂಬಿಸಿ ಹಣಕ್ಕೆ ಬೇಡಿಕೆ ಇರಿಸಿ ಹಣ ಪಡೆದು ವಂಚಿಸುತ್ತಿದ್ದ. ಕಳೆದ ಮಾರ್ಚ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಗೆ ಬಂದು ಮತ್ತೆ ತನ್ನ ವಂಚನೆ ಚಾಳಿ ಮುಂದುವರೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.