ಇದುವರೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳದವರು ಈಗಿನಿಂದಲೇ ಓದಿನತ್ತ ಮುಖ ಮಾಡಿ. ಪರೀಕ್ಷೆ ಸಮೀಪಿಸಿದ ವೇಳೆ ಒತ್ತಡಕ್ಕೆ ಸಿಲುಕಬೇಡಿ, ಗೊಂದಲಗಳಿಗೆ ಒಳಗಾಗಬೇಡಿ. ಆಸಕ್ತಿಯಿಂದ ಪಠ್ಯ ವಿಷಯಗಳನ್ನು ಓದಿ ಅರ್ಥ ಮಾಡಿಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಗ್ರಹಿಸಿಕೊಳ್ಳಿ. ಗುಂಪಾಗಿ ವಿಷಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಪರೀಕ್ಷೆಗಳು ಒಂದು ಪ್ರಕ್ರಿಯೆಯಷ್ಟೇ. ಅದಕ್ಕೆ ಎದೆಗುಂದಬಾರದು. ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡವರು ಪರೀಕ್ಷೆಗಳಿಗೆ ಎಂದಿಗೂ ಹೆದರುವುದಿಲ್ಲ. ಆತ್ಮವಿಶ್ವಾಸ, ಛಲ, ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸುವಂತೆ ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ತಾಲೂಕಿನ ಕಾಳೇನಹಳ್ಳಿಯ ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಕುರಿತು ಪ್ರೇರಣಾ ಹಾಗೂ ಪರಿವರ್ತನಾ ಕಾರ್ಯಾಗಾರದಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಘಟ್ಟ. ಭವಿಷ್ಯದಲ್ಲಿ ಏನಾಗಬೇಕೆಂಬುದನ್ನು ಈ ಹಂತದಲ್ಲೇ ನಿರ್ಧಾರ ಮಾಡಿಕೊಳ್ಳಬೇಕು. ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು ಕಲಿಕೆಯಲ್ಲಿ ತೊಡಗಿದಾಗ ಮಾತ್ರ ಶೈಕ್ಷಣಿಕವಾಗಿ ಏನಾದರೊಂದು ಸಾಧನೆ ಮಾಡಲು ಸಾಧ್ಯ ಎಂದರು.

ಇದುವರೆಗೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳದವರು ಈಗಿನಿಂದಲೇ ಓದಿನತ್ತ ಮುಖ ಮಾಡಿ. ಪರೀಕ್ಷೆ ಸಮೀಪಿಸಿದ ವೇಳೆ ಒತ್ತಡಕ್ಕೆ ಸಿಲುಕಬೇಡಿ, ಗೊಂದಲಗಳಿಗೆ ಒಳಗಾಗಬೇಡಿ. ಆಸಕ್ತಿಯಿಂದ ಪಠ್ಯ ವಿಷಯಗಳನ್ನು ಓದಿ ಅರ್ಥ ಮಾಡಿಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳನ್ನು ಗ್ರಹಿಸಿಕೊಳ್ಳಿ. ಗುಂಪಾಗಿ ವಿಷಯಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಿ. ಅರ್ಥವಾಗದ ವಿಷಯಗಳನ್ನು ಶಿಕ್ಷಕರಿಂದ ಕೇಳಿ ಪರಿಹರಿಸಿಕೊಳ್ಳಿ. ಕಷ್ಟವಾದ ವಿಷಯಗಳ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುವಂತೆ ಸಲಹೆ ನೀಡಿದರು.

ರಾತ್ರಿ ಬೇಗ ಮಲಗಿ. ಬೆಳಗ್ಗೆ ಬೇಗ ಎದ್ದು ಓದಬೇಕು. ಓದುವಷ್ಟು ಸಮಯವೂ ವಿಷಯಗಳನ್ನು ಸಂಪೂರ್ಣ ಮನನ ಮಾಡಿಕೊಳ್ಳಬೇಕು. ಮೊಬೈಲ್-ಟೀವಿಗಳಿಂದ ದೂರ ಉಳಿದು ಪಠ್ಯ ವಿಷಯಗಳನ್ನು ಮತ್ತೆ ಮತ್ತೆ ಓದುವುದರಿಂದ ಮನಸ್ಸಿನಲ್ಲಿ ಉಳಿಯುತ್ತವೆ. ಓದಿದ ವಿಷಯಗಳನ್ನು ಆಗಾಗ ಪುನರಾವಲೋಕನ ಮಾಡುವಂತೆ ಹೇಳಿದರು.

ಯೋಗ, ಧ್ಯಾನ, ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಕ್ರಿಯಾಶೀಲತೆ ಬೆಳವಣಿಗೆ ಕಾಣುತ್ತದೆ. ಆರೋಗ್ಯಯುತವಾದ ಆಹಾರಗಳನ್ನು ಹೆಚ್ಚು ಸೇವಿಸಿ. ಜಂಕ್‌ಫುಡ್, ಫಾಸ್ಟ್‌ಫುಡ್‌ಗಳಿಂದ ದೂರ ಉಳಿದು ತರಕಾರಿ, ಸೊಪ್ಪು, ಮೊಟ್ಟೆಯಂತಹ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಸೇವಿಸುವ ಜೊತೆಗೆ ಹಣ್ಣುಗಳನ್ನು ಸೇವಿಸುವಂತೆ ತಿಳಿಸಿದರು.

ಪ್ರತಿ ವರ್ಷ ಪರೀಕ್ಷೆಗಳು ಎದುರಾಗುತ್ತಲೇ ಇರುತ್ತವೆ. ಅದಕ್ಕೆ ಸಿದ್ಧರಾಗಲೇಬೇಕಾಗುವುದು ವಿದ್ಯಾರ್ಥಿಗಳ ಕರ್ತವ್ಯ. ಸೋಲಿನ ಕಡೆಗೆ ಮುಖ ಮಾಡದೆ ಗೆಲುವನ್ನೇ ಗುರಿಯಾಗಿಸಿಕೊಂಡು ಮುನ್ನಡೆಯಬೇಕು. ಕೆಲವೊಮ್ಮೆ ಫೇಲಾದರೂ ಪ್ರಾಣ ಕಳೆದುಕೊಳ್ಳುವಂತಹ ಹೇಡಿತನ ಪ್ರದರ್ಶಿಸಬೇಡಿ. ಮತ್ತೆ ಪ್ರಯತ್ನಿಸಿ. ಕೆಲವರಿಗೆ ವಿದ್ಯೆ ಇಲ್ಲದಿದ್ದರೂ ಜೀವನದಲ್ಲಿ ಯಶಸ್ಸು ಕಾಣುವ ಬುದ್ಧಿ-ಯುಕ್ತಿ ಇರುತ್ತದೆ. ಅದರಲ್ಲಿ ಬೆಳವಣಿಗೆಯನ್ನು ಕಾಣುವತ್ತ ಆಸಕ್ತಿ ವಹಿಸಿ. ಬದುಕನ್ನು ಉಜ್ವಲವಾಗಿ ಕಟ್ಟಿಕೊಳ್ಳುವ ಬುದ್ಧಿ ಇದ್ದರೆ ಸಾಕು. ವಿದ್ಯಾವಂತರಾಗಿ ಸಂಸ್ಕಾರವಂತರಾಗದಿದ್ದರೆ ವಿದ್ಯೆಗೇ ಬೆಲೆ ಇರುವುದಿಲ್ಲ. ತಂದೆ-ತಾಯಿಯರನ್ನು ಗೌರವಿಸುವ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಉತ್ತಮ ವ್ಯಕ್ತಿಗಳಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಮುಖ್ಯ ಶಿಕ್ಷಕ ಅಶೋಕ್, ಸಹ ಶಿಕ್ಷಕರು ಹಾಜರಿದ್ದರು.